ಗುವಾಹಟಿ: ಅಸ್ಸೋಂನಲ್ಲಿ ಕಳೆದ ಗುರುವಾರ ನಡೆದಿದ್ದ ಎರಡನೇ ಹಂತದ ಮತದಾನ ಮುಕ್ತಾಯದ ಬಳಿಕ ಬಿಜೆಪಿ ಅಭ್ಯರ್ಥಿ ಕಾರಿನಲ್ಲಿ ವಿದ್ಯುನ್ಮಾನ ಮತ ಯಂತ್ರ ಸಾಗಾಣಿಕೆ ಮಾಡಲಾಗಿತ್ತು. ಇದು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತತಂತೆ ಮತ್ತೊಂದು ಆತಂಕಕಾರಿ ಅಂಶ ಬಯಲಾಗಿದೆ.
ಈ ಘಟನೆ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಿ, ಮರುಮತದಾನ ನಡೆಸಲು ಕೇಂದ್ರ ಚುನಾವಣಾ ಆಯೋಗ ಆದೇಶ ನೀಡಿತ್ತು. ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಅಂದು ಸಿಕ್ಕಿದ್ದ ವಿದ್ಯುನ್ಮಾನ ಯಂತ್ರದಲ್ಲಿ 90 ಮಂದಿ ವೋಟರ್ಗಳಿಂದ 181 ಮತಗಳು ಚಲಾವಣೆಗೊಂಡಿವೆ ಎಂಬ ಮಹತ್ವದ ಮಾಹಿತಿ ಬಹಿರಂಗಗೊಂಡಿದೆ.
ಇದನ್ನೂ ಓದಿ: ನಾಳೆ ಅಸ್ಸೋಂನಲ್ಲಿ ಕೊನೆಯ ಹಂತದ ಮತದಾನ : 337 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ಮತಗಟ್ಟೆ 149 ಇಂದಿರಾ ಎಂ ವಿ ಸ್ಕೂಲ್ ಎಲ್ಎಸಿ 1 ರತಾಬಾರಿ ವಲಯದಲ್ಲಿ ನಡೆದಿದ್ದ ಚುನಾವಣೆ ವೇಳೆ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಿಜೆಪಿ ಅಭ್ಯರ್ಥಿ ಕಾರಿನಲ್ಲಿ ಇವಿಎಂ ತೆಗೆದುಕೊಂಡು ಹೋಗಿದ್ದು, ಇದರ ವಿಡಿಯೋ ವೈರಲ್ ಆಗಿತ್ತು. ಈ ಮತಗಟ್ಟೆಯಲ್ಲಿ ಕೇವಲ 90 ನೋಂದಾಯಿತ ಮತದಾರರು ಇದ್ದು, 181 ವೋಟ್ ಚಲಾವಣೆಗೊಂಡಿವೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ಇಲ್ಲಿಯವರೆಗೆ ಆರು ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಿದೆ.
ಅಸ್ಸೋಂನ 126 ಕ್ಷೇತ್ರಗಳಿಗೆ ಮೂರು ಹಂತದಲ್ಲಿ ಮತದಾನ ನಡೆಯುತ್ತಿದ್ದು, ಈಗಾಗಲೇ ಎರಡು ಹಂತಗಳು ಮುಕ್ತಾಯಗೊಂಡಿವೆ. ಮಂಗಳವಾರ ಕೊನೆಯ ಹಂತದ ವೋಟಿಂಗ್ ನಡೆಯಲಿದ್ದು, 40 ಕ್ಷೇತ್ರದ 337 ಅಭ್ಯರ್ಥಿಗಳ ಭವಿಷ್ಯ ನಿರ್ಧಾರಗೊಳ್ಳಲಿದೆ.