ನೋಯ್ಡಾ (ನವದೆಹಲಿ): ಗ್ರೇಟರ್ ನೋಯ್ಡಾದ ಜೆವಾರ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು 9 ಜನ ಕಾರ್ಮಿಕರು ಗಾಯಗೊಂಡಿರುವ ಘಟನೆ ಇಂದು ಸಂಭವಿಸಿದೆ.
ನಿಲ್ದಾಣದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಸಿಲಿಂಡರ್ ಸ್ಪೋಟಗೊಂಡಿದೆ. ಘಟನೆಯಲ್ಲಿ ಒಂಬತ್ತು ಜನರು ಗಾಯಗೊಂಡಿದ್ದು, ಅದರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಇನ್ನು ಗಾಯಾಳುಗಳನ್ನು ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದು, ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಘಟನೆಗೆ ಮೂಲ ಕಾರಣ ತಿಳಿದು ಬಂದಿಲ್ಲ. ಇನ್ನು ಘಟನೆ ಬಗ್ಗೆ ಕಾಮಗಾರಿಯ ಗುತ್ತಿಗೆಯನ್ನು ಪಡೆದಿರುವ ಖಾಸಗಿ ಕಂಪನಿಯ ಅಧಿಕಾರಿಗಳು ಯಾವುದೇ ಹೇಳಿಕೆಯನ್ನು ನೀಡಿಲ್ಲ.
ಗುತ್ತಿಗೆ ಪಡೆದ ಟಾಟಾ ಕಂಪನಿ: ವಿಮಾನ ನಿಲ್ದಾಣದ ಕಾಮಗಾರಿಯನ್ನು ಟಾಟಾ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಒಂದು ವರ್ಷದಿಂದ ವಿಮಾನ ನಿಲ್ದಾಣದ ಕಾಮಗಾರಿ ನಡೆಯುತ್ತಿದ್ದು, ನಿಲ್ದಾಣದ ಮೊದಲ ಹಂತ ಸೆಪ್ಟೆಂಬರ್ 2024ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಜೆವಾರ್ ವಿಮಾನ ನಿಲ್ದಾಣವು ದೆಹಲಿಯಿಂದ 72 ಕಿಮೀ, ಗ್ರೇಟರ್ ನೋಯ್ಡಾದಿಂದ 28 ಕಿಮೀ ಮತ್ತು ನೋಯ್ಡಾದಿಂದ 40 ಕಿಮೀ ದೂರದಲ್ಲಿರಲಿದೆ.
2001ರಲ್ಲಿ ವಿಮಾನ ನಿಲ್ದಾಣದ ಮೊದಲ ಪ್ರಸ್ತಾವನೆ: ವಿಮಾನ ನಿಲ್ದಾಣದ ಮೊದಲ ಪ್ರಸ್ತಾಪವನ್ನು 2001 ರಲ್ಲಿ ಅಂದಿನ ಯುಪಿ ಮುಖ್ಯಮಂತ್ರಿ ರಾಜನಾಥ್ ಸಿಂಗ್ ಅವರು ಕೇಂದ್ರ ಸರ್ಕಾರದ ಮುಂದಿಟ್ಟರು. ನಂತರ ಮಾಯಾವತಿ ಸರ್ಕಾರವೂ ವಿಮಾನ ನಿಲ್ದಾಣಕ್ಕಾಗಿ 2000 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಮೀಸಲಿರಿಸಿತ್ತು. ನಂತರ ಇದೀಗ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನವೆಂಬರ್ 2021 ರಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಅಡಿಪಾಯ ಹಾಕಿತು.
ರಾಜಸ್ಥಾನದ ಜೋಧ್ಪುರದಲ್ಲಿ ಸಿಲಿಂಡರ್ ಸ್ಪೋಟ: ಇನ್ನೂ ಇತ್ತೀಚೆಗೆ ರಾಜಸ್ಥಾನದ ಜೋಧ್ಪುರದಲ್ಲಿ ಸಿಲಿಂಡರ್ ಸ್ಪೋಟಗೊಂಡು 35 ಜನ ಸಾವನ್ನಪಿದ್ದರು. ಮೃತರ ಕುಟುಂಬಕ್ಕೆ 50 ಲಕ್ಷ ಪರಿಹಾರದ ಪ್ಯಾಕೇಜ್ ನೀಡುವಂತೆ ಒತ್ತಾಯಿಸಿ ಸರ್ಕಾರದ ವಿರುದ್ಧ ಮೃತರ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದರು. ಕಡೆಗೂ ಪ್ರತಿಭಟನಾಕಾರರು ಮತ್ತು ಸರ್ಕಾರ ಒಂದು ನಿರ್ಣಯಕ್ಕೆ ಬರುವ ಮೂಲಕ ಸಮಸ್ಯೆಯನ್ನು ಬಗೆಹರಿಸಲಾಗಿತ್ತು. ಅಲ್ಲದೇ ಮೃತ ಕುಟುಂಬಕ್ಕೆ ತಲಾ 17 ಲಕ್ಷ ಪರಿಹಾರವನ್ನು ಸರ್ಕಾರ ಘೊಷಣೆ ಕೂಡಾ ಮಾಡಿತ್ತು.
ಪಾಣಿಪತ್‌ನಲ್ಲಿ ಸಿಲಿಂಡರ್ ಸ್ಪೋಟದಲ್ಲಿ 6 ಜನ ಸಾವು: ಇನ್ನೂ ಪಾಣಿಪತ್ನ ತಹಸಿಲ್ ಕ್ಯಾಂಪ್ ಎಂಬಲ್ಲಿ ಕೆಲವು ದಿನಗಳ ಹಿಂದೆ ಸಿಲಿಂಡರ್ ಸ್ಫೋಟ ಸಂಭವಿಸಿ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದರು. ಟೀ ಮಾಡಲೆಂದು ಗ್ಯಾಸ್ ಆನ್ ಮಾಡಿದಾಗ ಸಿಲಿಂಡರ್ ಸ್ಫೋಟಗೊಂಡಿತ್ತು. ಸ್ಫೋಟದಿಂದ ಭಾರಿ ಬೆಂಕಿ ಆವರಿಸಿ ಪತಿ - ಪತ್ನಿ ಸೇರಿದಂತೆ ನಾಲ್ವರು ಮಕ್ಕಳು ಸಜೀವ ದಹನವಾಗಿದ್ದರು. ಅಬ್ದುಲ್ ಕರೀಂ (50), ಅಫ್ರೋಜಾ (46), ಇಶ್ರತ್ ಖಾತೂನ್ (18), ರೇಷ್ಮಾ (17), ಅಫ್ಫಾನ್ (7) ಮತ್ತು ಅಬ್ದುಲ್ ಶಕುರ್ (10) ಘಟನೆಯಲ್ಲಿ ಅಸುನೀಗಿದ್ದರು. ಹಿರಿಯ ಮಗಳಿಗೆ ಸದ್ಯದಲ್ಲೇ ನಿಖಾ ಮಾಡುವ ನಿರ್ಧಾರವನ್ನು ಕುಟುಂಬ ಮಾಡಿತ್ತು.
ಅಬ್ದುಲ್ ಕರೀಂ ಮತ್ತು ಅವರ ಪತ್ನಿ ಅಫ್ರೋಜಾ ತಮ್ಮ ಇಬ್ಬರು ಪುತ್ರರೊಂದಿಗೆ ಪಾಣಿಪತ್‌ನಲ್ಲಿ ವಾಸಿಸುತ್ತಿದ್ದರು. ತಮ್ಮ ಇಬ್ಬರು ಹೆಣ್ಣು ಮಕ್ಕಳು ಪಶ್ಚಿಮ ಬಂಗಾಳದಲ್ಲಿ ವಾಸಿಸುತ್ತಿದ್ದರು. ಹಿರಿಯ ಪುತ್ರಿ ಇಶ್ರತ್ ಖಾತೂನ್ ಅವರ ಮದುವೆ ಮಾಡುವ ಉದ್ದೇಶದಿಂದ ಒಂದು ತಿಂಗಳ ಹಿಂದೆಯಷ್ಟೇ ಅಬ್ದುಲ್ ಕರೀಂ ತನ್ನ ಮಕ್ಕಳನ್ನು ಪಾಣಿಪತ್ಗೆ ಕರೆಯಿಸಿಕೊಂಡಿದ್ದರು.
ಇದನ್ನೂ ಓದಿ: ನೃತ್ಯದ ವಿಚಾರಕ್ಕೆ ಬಾಲಕಿಗೆ ಪೆಟ್ರೋಲ್ ಸುರಿದ ಬೆಂಕಿ ಹಚ್ಚಿದ ದುರುಳರು