ನವದೆಹಲಿ: ಭಾರತೀಯ ಸೇನಾ ಮುಖ್ಯಸ್ಥರ ಸಮಾವೇಶದ 8ನೇ ಆವೃತ್ತಿ ಸೆಪ್ಟೆಂಬರ್ 16ರಿಂದ ಸೆಪ್ಟೆಂಬರ್ 18ರವರೆಗೆ ನವದೆಹಲಿಯಲ್ಲಿ ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದ್ದು, ವಿಶೇಷವಾಗಿ ನೇಪಾಳ ಸೇನೆಯ ಮಾಜಿ ಮುಖ್ಯಸ್ಥರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗುತ್ತದೆ.
ಈ ಸಮಾವೇಶದಲ್ಲಿ ಸೇನೆಯ ಹಳೆಯ ಸಿಬ್ಬಂದಿ ಹಾಗೂ ಈಗಿನ ಪ್ರಸ್ತುತ ಸಿಬ್ಬಂದಿಯ ನಡುವೆ ವಿಚಾರ ವಿನಿಮಯ ನಡೆಯಲಿದೆ. ಭಾರತೀಯ ಸೇನೆಯ ಕ್ಷಿಪ್ರ ಪರಿವರ್ತನೆ, ಆತ್ಮನಿರ್ಭರ ಮೂಲಕ ಸ್ವಾವಲಂಬನೆ ಮತ್ತು ಭಾರತೀಯ ಸೈನಿಕರ ರಕ್ಷಣಾ ಉತ್ಪನ್ನಗಳ ತಯಾರಿಕೆಯಲ್ಲಿ ಕೌಶಲ್ಯ ಮತ್ತು ಮೇಕ್ ಇನ್ ಇಂಡಿಯಾ ಮುಂತಾದ ಅಂಶಗಳ ಬಗ್ಗೆ ಈ ಕಾರ್ಯಕ್ರಮದಲ್ಲಿ ಚರ್ಚೆ ನಡೆಸಲಾಗುತ್ತದೆ.
ಇದೇ ವೇಳೆ, ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಮಾಜಿ ಸೇನಾ ಮುಖ್ಯಸ್ಥರಿಂದ ಹುತಾತ್ಮ ಯೋಧರಿಗೆ ಗೌರವ ಸಲ್ಲಿಕೆಯಾಗಲಿದೆ. ಭಾರತೀಯ ಸೇನೆಯ ವಿವಿಧ ಆಡಳಿತಾತ್ಮಕ ಮತ್ತು ಮಾನವ ಸಂಪನ್ಮೂಲ ಅಂಶಗಳ ಕುರಿತು ಮತ್ತು ಅಭಿಪ್ರಾಯಗಳ ವಿನಿಮಯಕ್ಕಾಗಿ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳೊಂದಿಗೆ ಸಂವಾದವನ್ನು ನಾಳೆ (ಶುಕ್ರವಾರ) ನಿಗದಿ ಮಾಡಲಾಗಿದೆ.
ಸೇನಾ ಮುಖ್ಯಸ್ಥರು ಸೊಸೈಟಿ ಆಫ್ ಇಂಡಿಯನ್ ಡಿಫೆನ್ಸ್ ಮ್ಯಾನುಫ್ಯಾಕ್ಚರರ್ಸ್ (SIDM- Society of Indian Defence Manufacturers) ಸದಸ್ಯರೊಂದಿಗೆ ಸಂವಾದ ನಡೆಸುತ್ತಾರೆ, ಅಲ್ಲಿ ಭಾರತೀಯ ಸೇನೆ ಮತ್ತು ದೇಶದ ಖಾಸಗಿ ರಕ್ಷಣಾ ತಯಾರಕರ ಸಂಬಂಧದ ಕುರಿತಂತೆಯೂ ಅಭಿಪ್ರಾಯ ಹಂಚಿಕೊಳ್ಳಲಾಗುತ್ತದೆ.
ಇದನ್ನೂ ಓದಿ: ಭಯಾನಕ ದೃಶ್ಯ.. ದೋಣಿ ಮುಳುಗಿ ಮೂವರ ಸಾವು, 8 ಮಂದಿ ನಾಪತ್ತೆ...VIDEO