ಮುಂಬೈ: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿದ್ದ ಬುಡಕಟ್ಟು ಹಕ್ಕುಗಳ ಹೋರಾಟಗಾರ ಜೆಸ್ಯೂಟ್ ಪಾದ್ರಿ ಸ್ಟಾನ್ ಸ್ವಾಮಿ ನಿಧನರಾಗಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಅಧಿಕಾರಿಯೊಬ್ಬರು ಸೋಮವಾರ ಬಾಂಬೆ ಹೈಕೋರ್ಟ್‌ಗೆ ಈ ಬಗ್ಗೆ ಮಾಹಿತಿ ನೀಡಿದರು.
ಸ್ವಾಮಿ (84) ಸೋಮವಾರ ಮಧ್ಯಾಹ್ನ 1.30ಕ್ಕೆ ನಿಧನರಾದರು ಎಂದು ಉಪನಗರ ಬಾಂದ್ರಾದ ಹೋಲಿ ಫ್ಯಾಮಿಲಿ ಆಸ್ಪತ್ರೆಯ ನಿರ್ದೇಶಕ ಡಾ.ಇಯಾನ್ ಡಿಸೋಜ ಅವರು ನ್ಯಾಯಮೂರ್ತಿಗಳಾದ ಎಸ್.ಎಸ್.ಶಿಂಧೆ ಮತ್ತು ಎನ್.ಜೆ.ಜಮದಾರ್ ಅವರ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ತಿಳಿಸಿದರು.
ಬುಧವಾರ ಕೋವಿಡ್ -19 ಮತ್ತು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರಿಂದ ವೈದ್ಯಕೀಯ ನೆರವು ಕೋರಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಬುಡಕಟ್ಟು ಹಕ್ಕುಗಳ ಕಾರ್ಯಕರ್ತ ಸ್ವಾಮಿ ಅವರನ್ನು ಮೇ 29 ರಂದು ತಾಲೋಜ ಜೈಲಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಭಾನುವಾರ ಮುಂಜಾನೆ ಸ್ವಾಮಿಗೆ ಹೃದಯಾಘಾತವಾಯಿತು ಎಂದು ಡಿಸೋಜಾ ನ್ಯಾಯಾಲಯಕ್ಕೆ ತಿಳಿಸಿದರು. ಶ್ವಾಸಕೋಶದ ಸೋಂಕು, ಪಾರ್ಕಿನ್ಸನ್ ಕಾಯಿಲೆ ಮತ್ತು ಕೊರೊನಾ ಸಾವಿಗೆ ಕಾರಣ ಎಂದು ಅವರು ಹೇಳಿದರು.
ಜೆಸ್ಯೂಟ್ ಪಾದ್ರಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡಲು ವಿಫಲರಾದ ತಲೋಜಾ ಜೈಲು ಅಧಿಕಾರಿಗಳ ಮೇಲೆ ವಕೀಲ ಮಿಹಿರ್ ದೇಸಾಯಿ ನಿರ್ಲಕ್ಷ್ಯದ ಆರೋಪ ಹಾಕಿದ್ದಾರೆ. ಸ್ವಾಮಿ ಅವರನ್ನು 2020 ರ ಅಕ್ಟೋಬರ್‌ನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿತ್ತು ಮತ್ತು ಅಂದಿನಿಂದ ಜೈಲಿನಲ್ಲಿದ್ದರು.
ಇದನ್ನೂ ಓದಿ: ಸ್ಟಾನ್ ಸ್ವಾಮಿಗೆ ಅನಾರೋಗ್ಯ.. 15 ದಿನ ಆಸ್ಪತ್ರೆಗೆ ದಾಖಲಿಸಲು ಕೋರ್ಟ್ ನಿರ್ದೇಶನ
ಏನಿದು ಭೀಮಾ ಕೋರೆಗಾಂವ್ ಪ್ರಕರಣ
ದಲಿತರು ಮರಾಠಾ ಪೇಶ್ವೆಗಳ ವಿರುದ್ಧ ಯುದ್ಧದಲ್ಲಿ ಜಯಗಳಿಸಿದ ದ್ವಿಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಭೀಮಾ ಕೋರೆಗಾಂವ್‌ನಲ್ಲಿ 2018ರ ಜನವರಿ 1ರಂದು ಹಿಂಸಾಚಾರ ನಡೆದಿತ್ತು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು, ಹಿಂಸಾಚಾರಕ್ಕೆ ನಕ್ಸಲರ ನಂಟು ಇದೆ ಎಂದು ಆರೋಪಿಸಿದ್ದರು. 2017ರ ಡಿಸೆಂಬರ್ 31ರಂದು ನಡೆದ ಸಭೆಗೆ ನಕ್ಸಲರೇ ಹಣಕಾಸು ನೆರವು ನೀಡಿದ್ದರು. ಈ ಸಭೆಯಲ್ಲಿ ಉದ್ರೇಕಕಾರಿ ಭಾಷಣಗಳನ್ನು ಮಾಡಲಾಗಿತ್ತು.