ನವದೆಹಲಿ: ಉಭಯ ದೇಶಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ವ್ಯತ್ಯಾಸದಿಂದಾಗಿ ನೇಪಾಳದ ಗಡಿಯಲ್ಲಿರುವ ಬಿಹಾರದ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ರಹಸ್ಯವಾಗಿ ಮಾರಾಟವಾಗುತ್ತಿದೆ. ಕಳೆದ 6 ತಿಂಗಳಲ್ಲಿ ಇಂತಹ ಪ್ರಕರಣಗಳಲ್ಲಿ 84 ಜನರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವಾಲಯ ರಾಜ್ಯಸಭೆಗೆ ತಿಳಿಸಿದೆ.
ಬಿಹಾರದ ಬಿಜೆಪಿ ಸಂಸದ ಸುಶೀಲ್ ಮೋದಿ ಅವರ ಪ್ರಶ್ನೆಗೆ ಉತ್ತರಿಸಿದ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರೈ, ಬಿಹಾರದ ಪೂರ್ವ ಚಂಪಾರನ್, ಪಶ್ಚಿಮ ಚಂಪಾರನ್ ಮತ್ತು ಅರಿಯಾ ಜಿಲ್ಲೆಗಳಲ್ಲಿ ಇಂತಹ ಕೆಲವು ಘಟನೆಗಳು ವರದಿಯಾಗಿವೆ ಎಂದು ಬಿಹಾರ ಸರ್ಕಾರ ತಿಳಿಸಿರುವುದಾಗಿ ಮಾಹಿತಿ ನೀಡಿದರು.
ಓದಿ : ಮಮತಾ ಬ್ಯಾನರ್ಜಿ ಒಂದು ಬರ್ಮುಡಾ ಯಾಕೆ ಧರಿಸಬಾರದು?.. ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ವಿವಾದಾದ್ಮಕ ಹೇಳಿಕೆ
ಕಳೆದ ಆರು ತಿಂಗಳಲ್ಲಿ ನೇಪಾಳದಿಂದ ಬಿಹಾರಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಕಳ್ಳಸಾಗಣೆ ಮಾಡಿದ 84 ಜನರನ್ನು ಬಂಧಿಸಲಾಗಿದ್ದು, 245 ಲೀಟರ್ ಪೆಟ್ರೋಲ್ ಮತ್ತು 9,834 ಲೀಟರ್ ಡೀಸೆಲ್ಅನ್ನು ರಾಜ್ಯದ ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ ಎಂದು ನಿತ್ಯಾನಂದ್ ರೈ ರಾಜ್ಯಸಭೆಗೆ ಹೇಳಿದರು.
"ಸಶಸ್ತ್ರ ಸೀಮಾ ಬಾಲ್ (ಎಸ್‌ಎಸ್‌ಬಿ), ಗಡಿ ಕಾವಲು ಪಡೆ ಮತ್ತು ಇಂಡೋ-ನೇಪಾಳ ಗಡಿ ಭದ್ರತಾ ಪಡೆ ಗಡಿಯುದ್ದಕ್ಕೂ ಕಳ್ಳಸಾಗಣೆ ಮತ್ತು ಇತರ ಅಕ್ರಮ ಚಟುವಟಿಕೆಗಳನ್ನು ಪರಿಶೀಲಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುತ್ತಿದೆ. ಗಸ್ತು ತಿರುಗುವುದು, ನಾಕಾಬಂದಿ, ಗಡಿ ದಾಟುವ ವ್ಯಕ್ತಿಗಳ ತಪಾಸಣೆ ಮುಂತಾದ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಭದ್ರತಾ ಸಂಸ್ಥೆಗಳಿಂದ ಪಡೆದ ಮಾಹಿತಿ ಆಧಾರದ ಮೇಲೆ ಲಿಖಿತ ಉತ್ತರ ನೀಡಲಾಗಿದೆ ಎಂದರು.