ನವದೆಹಲಿ: 21ನೇ ವಾರ್ಷಿಕ ಭಾರತ - ರಷ್ಯಾ ಶೃಂಗಸಭೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಭಾಗಿಯಾಗಿ ಮಾತುಕತೆ ನಡೆಸಿದ್ದು, ಇದಕ್ಕೂ ಮುಂಚಿತವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಷ್ಯಾದ ರಕ್ಷಣಾ ಸಚಿವ ಸರ್ಗೆ ಶೋಯಿಗು ನಡುವಿನ ದ್ವಿಪಕ್ಷೀಯ ಸಭೆಯಲ್ಲಿ ಅನೇಕ ಒಪ್ಪಂದ ಅಂತಿಮಗೊಳಿಸಲಾಗಿದೆ.
ಪ್ರಮುಖವಾಗಿ, ಭಾರತದ ಅಮೇಥಿಯಲ್ಲಿ ಆರು ಲಕ್ಷ ಎಕೆ-203 ಅಸಾಲ್ಟ್ ರೈಫಲ್ಗಳ ತಯಾರಿಕೆ ಒಪ್ಪಂದ ಪ್ರಮುಖವಾಗಿದೆ. ಇದಕ್ಕಾಗಿ 5,100 ಕೋಟಿ ರೂಪಾಯಿ ಖರ್ಚು ಮಾಡಲು ನಿರ್ಧರಿಸಲಾಗಿದೆ. ಜೊತೆಗೆ 2031ರವರೆಗೆ ಭಾರತಕ್ಕೆ ಮಿಲಿಟರಿ ತಾಂತ್ರಿಕ ಸಹಕಾರ ನೀಡುವ ಒಪ್ಪಂದ ನವೀಕರಣಗೊಂಡಿದೆ. ಕಳೆದ 80 ವರ್ಷಗಳಿಂದ ಭಾರತಕ್ಕೆ ರಷ್ಯಾ ಮಿಲಿಟರಿ ಸಹಾಯ ನೀಡುತ್ತಿದ್ದು, ಒಪ್ಪಂದದ ಪ್ರಕಾರ 2021ಕ್ಕೆ ಇದು ಮುಕ್ತಾಯಗೊಳ್ಳಬೇಕಾಗಿತ್ತು. ಆದರೆ, ಇಂದಿನ ಸಭೆಯಲ್ಲಿ ಮುಂದಿನ 10 ವರ್ಷಗಳ ಕಾಲ ಒಪ್ಪಂದ ನವೀಕರಣಗೊಂಡಿದೆ.
ಇದರ ಜೊತೆಗೆ 2019ರ ಫೆಬ್ರವರಿಯಲ್ಲಿ ಆಗಿರುವ ಸಣ್ಣ ಶಸ್ತ್ರಾಸ್ತ್ರಗಳ ತಯಾರಿಕಾ ಕ್ಷೇತ್ರದ ತಿದ್ದುಪಡ್ಡಿ ಮಾಡುವ ಮತ್ತೊಂದು ಒಪ್ಪಂದಕ್ಕೆ ಇಂದು ಸಹಿ ಹಾಕಲಾಗಿದೆ. ಈ ವಿಚಾರವಾಗಿ ಮಾತನಾಡಿರುವ ಸರ್ಗೆ ಭಾರತ-ರಷ್ಯಾ ನಡುವಿನ ಪಾಲುದಾರಿಕೆ ಅತಿ ಮುಖ್ಯವಾಗಿದ್ದು, ರಕ್ಷಣೆಗಾಗಿ ಉಭಯ ದೇಶಗಳು ಒಟ್ಟಾಗಿ ಪ್ರಯತ್ನಿಸುತ್ತಿವೆ ಎಂದರು.
ಇದೇ ವೇಳೆ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಕೂಡ ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಜೊತೆ ಮಹತ್ವದ ಮಾತುಕತೆ ನಡೆಸಿದರು. ಈ ವೇಳೆ, ಉಭಯ ದೇಶಗಳ ನಡುವಿನ ರಾಜಕೀಯ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆದಿರುವುದಾಗಿ ವರದಿಯಾಗಿದೆ.