ಮುಂಬೈ (ಮಹಾರಾಷ್ಟ್ರ) : ಇಂದು ದೇಶಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಗಿದೆ. ದೇಶದ ವಿವಿಧೆಡೆ ಮೊಸರು ಕುಡಿಕೆ ಉತ್ಸವವನ್ನು ಬಹಳ ಅದ್ಧೂರಿಯಾಗಿ ಆಚರಿಸಲಾಗಿದೆ. ಈ ಸಂಭ್ರಮದ ನಡುವೆ ಮುಂಬೈನಲ್ಲಿ 77 ಗೋವಿಂದರು(ಮೊಸರು ಕುಡಿಕೆ ಸ್ಪರ್ಧೆಯಲ್ಲಿ ಭಾಗವಹಿಸಿದವರು) ಬಿದ್ದು ಗಾಯಗೊಂಡಿದ್ದಾರೆ. ಪಕ್ಕದ ಥಾಣೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ ಮುಂಬೈ ನಗರ ಪಾಲಿಕೆಯ ಆರೋಗ್ಯ ವಿಭಾಗ ಮಾಹಿತಿ ನೀಡಿದೆ.
ಇಂದು ಮುಂಬೈ ನಗರದಲ್ಲಿ ಅದ್ದೂರಿಯಾಗಿ ದಹಿ ಹಂಡಿ (ಮೊಸರು ಕುಡಿಕೆ) ಉತ್ಸವವನ್ನು ಆಚರಿಸಲಾಗಿದೆ. ಈ ವೇಳೆ, ಪಾಲಿಕೆಯ ವ್ಯಾಪ್ತಿಯಲ್ಲಿ ಒಟ್ಟು 77 ಗೋವಿಂದರು ಗಾಯಗೊಂಡಿದ್ದಾರೆ. ಇದರಲ್ಲಿ 7 ಮಂದಿಗೆ ಗಂಭೀರ ಗಾಯಗಳಾಗಿದ್ದು, ಇಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.
ಉತ್ಸವ ಸಂಬಂಧ ಮುನ್ನೆಚ್ಚರಿಕಾ ಕ್ರಮವಾಗಿ ನಗರ ಪಾಲಿಕೆ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆಗಾಗಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಗಾಯಾಳುಗಳಿಗೆ ವಿಶೇಷ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು. ಇಂದು ಬೆಳಗ್ಗೆ ಓರ್ವ ಗೋವಿಂದ ದಹಿ ಹಂಡಿ ವೇಳೆ ಗಾಯಗೊಂಡು ಇಲ್ಲಿನ ನಗರಪಾಲಿಕೆ ವ್ಯಾಪ್ತಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಒಟ್ಟು 77 ಮಂದಿಗೆ ಇಲ್ಲಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಪಾಲಿಕೆ ತಿಳಿಸಿದೆ.
ದಹಿ ಹಂಡಿ ಆಚರಣೆ ವೇಳೆ ಬಿದ್ದು ಗಾಯಗೊಂಡು ಇಲ್ಲಿನ ಕೆಇಎಂ ಆಸ್ಪತ್ರೆಗೆ 26 ಮಂದಿ ಆಗಮಿಸಿದ್ದು, 4 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಚಿಕಿತ್ಸೆ ಪಡೆದು ಮರಳಿದ್ದಾರೆ. ಸಿಯೋನ್ ಆಸ್ಪತ್ರೆಯಲ್ಲಿ 7 ಮಂದಿ ದಾಖಲಾಗಿದ್ದು, ಎಲ್ಲರೂ ಚಿಕಿತ್ಸೆ ಪಡೆದು ಮರಳಿದ್ದಾರೆ. 4 ಜನರು ಜಯ್ಜಯ್ ಆಸ್ಪತ್ರೆಗೆ ದಾಖಲಾಗಿದ್ದು, ಇಬ್ಬರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸೇಂಟ್ ಜಾರ್ಜ್ ಆಸ್ಪತ್ರೆಯಲ್ಲಿ 1, ಜಿಟಿ ಆಸ್ಪತ್ರೆಯಲ್ಲಿ 2, ಪೋದ್ದಾರ್ ಆಸ್ಪತ್ರೆಯಲ್ಲಿ ದಾಖಲಾದ 4ರಲ್ಲಿ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರನ್ನು ಚಿಕಿತ್ಸೆ ಬಳಿಕ ಡಿಸ್ಚಾರ್ಜ್ ಮಾಡಲಾಗಿದೆ.
ಬಾಂಬೆ ಹಾಸ್ಟೆಲ್‌ನಲ್ಲಿ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜವಾಡಿ ಆಸ್ಪತ್ರೆಯಲ್ಲಿ ಇಬ್ಬರನ್ನು ದಾಖಲಿಸಲಾಗಿದೆ. ಬಾಂದ್ರಾ ಬಾಬಾ ಆಸ್ಪತ್ರೆಯಲ್ಲಿ 2 ಮಂದಿಗೆ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ. ವಿಎನ್ ದೇಸಾಯಿ ಆಸ್ಪತ್ರೆಯಲ್ಲಿ 2 ಮಂದಿ, ಕೂಪರ್ ಆಸ್ಪತ್ರೆಯಲ್ಲಿ 14 ಜನರಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಮುಂಬೈ ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗ ಮಾಹಿತಿ ನೀಡಿದೆ.
ಇದನ್ನೂ ಓದಿ : ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ವೈಭವದ ತೆರೆ : ಅದ್ಧೂರಿಯಾಗಿ ನಡೆದ ಮುದ್ದುಕೃಷ್ಣನ ಲೀಲೋತ್ಸವ ವಿಟ್ಲಪಿಂಡಿ