ಹರ್ದಾ(ಮಧ್ಯಪ್ರದೇಶ): ಭಾರತದ ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕ, ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ತಮ್ಮ ಸತ್ಯ ಹಾಗೂ ಅಹಿಂಸೆ ಮೂಲಕ ಬ್ರಿಟಿಷರ ವಿರುದ್ಧ ಹೋರಾಡಿ ದೇಶ ಸ್ವತಂತ್ರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಧ್ಯಪ್ರದೇಶದ ಹರ್ದಾ ನಗರದ ಸೋಕಲ್ ಕುಟುಂಬ ಸ್ವಾತಂತ್ರ್ಯ ಚಳವಳಿಯಲ್ಲಿ ಮುಂಚೂಣಿಯಲ್ಲಿತ್ತು ಎಂಬುದು ವಿಶೇಷ.
ಸ್ವಾತಂತ್ರ್ಯ ಹೋರಾಟಗಾರ ಚಂಪಾಲಾಲ್ ಶಂಕರ್ ಮತ್ತವರ ತಂದೆ ತುಳಸಿರಾಮ್ ಸೋಕಲ್ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹರ್ದಾದಲ್ಲಿ ಹಲವು ಕುಟುಂಬಗಳು ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರೂ, ಸೋಕಲ್ ಕುಟುಂಬ ಗಾಂಧೀಜಿಗೆ ನಿಕಟವಾಗಿತ್ತು. 1933ರ ಡಿ. 8 ರಂದು ಗಾಂಧೀಜಿ ಹರ್ದಾಗೆ ಭೇಟಿ ನೀಡಿದ್ದಾಗ ಅಲ್ಲಿನ ನಿವಾಸಿಗಳಿಂದ ದೇಣಿಗೆ ಸಂಗ್ರಹಿಸಿ ಸೋಕಲ್ ಕುಟುಂಬ ಗಾಂಧೀಜಿಗೆ ನೀಡಿತ್ತು.
ತುಳಸಿರಾಮ್ ಸೋಕಲ್ ಅವರ ಇಬ್ಬರು ಹೆಣ್ಣುಮಕ್ಕಳು ಈಗ 80 ಹಾಗೂ 90ರ ವಯೋ ವೃದ್ಧರು. ಹರಿಜನ ಕಲ್ಯಾಣಕ್ಕಾಗಿ ತಮ್ಮ ಅಭಿಯಾನದ ಭಾಗವಾಗಿ ಗಾಂಧೀಜಿ ಇಲ್ಲಿಗೆ ಭೇಟಿ ನೀಡಿದ ದಿನಗಳನ್ನ ನೆನಪಿಸಿಕೊಳ್ಳುತ್ತಾರೆ. ಗಾಂಧೀಜಿ ಅವರನ್ನು ಭೇಟಿಯಾಗಲು ಎಲ್ಲರೂ ತಾಳ್ಮೆಯಿಂದ ಸರತಿ ಸಾಲಿನಲ್ಲಿ ನಿಂತಿದ್ದರು, ಇದು ಗಾಂಧೀಜಿಗೆ ಬಹಳ ಇಷ್ಟವಾಯಿತು. ಜನರನ್ನು ಉದ್ದೇಶಿಸಿ ಅವರು ಮಾಡಿದ ಭಾಷಣದಲ್ಲಿ, ಇಂತಹ ಶಿಸ್ತನ್ನು ಎಲ್ಲಿಯೂ ನೋಡಿಲ್ಲ ಎಂದು ಹೇಳಿದ್ದರಂತೆ. ಜೊತೆಗೆ ಹರ್ದಾವನ್ನು "ಹೃದಯದ ನಗರ" ಎಂದು ಕರೆದಿದ್ದರು ಎನ್ನುತ್ತಾರೆ ಸರಳಾ ಸೋಕಲ್ .
ಹರ್ದಾದ ಜನರು ಗಾಂಧೀಜಿಗೆ ದೇಣಿಗೆ ಉಡುಗೊರೆ ನೀಡಿದರು. 1,633 ರೂಪಾಯಿ ಹಾಗೂ 15 ಅಣೆ(annas)ಗಳನ್ನು ಸಂಗ್ರಹಿಸಿದ್ದರು. ಇದು ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ದೊಡ್ಡ ಮೊತ್ತವಾಗಿತ್ತು. ಹರಿಜನ ಸೇವಕ ಎಂಬ ಪತ್ರಿಕೆಯಲ್ಲಿ ಉಲ್ಲೇಖಿಸಿದಂತೆ ಇದು ಬಹುಶಃ ಅವರ ಪ್ರವಾಸದ ಸಮಯದಲ್ಲಿ ಸಂಗ್ರಹಿಸಿದ ದೊಡ್ಡ ಮೊತ್ತ. ಪ್ರವಾಸದ ವೇಳೆ ಸಿಕ್ಕ ಬೆಳ್ಳಿ ತಟ್ಟೆಯನ್ನ ಗಾಂಧೀಜಿ ಹರಾಜು ಹಾಕಿದಾಗ ನಮ್ಮ ಅಜ್ಜ ಅದನ್ನ ಖರೀದಿಸಿದ್ದರಂತೆ. ಇದನ್ನು ಸೋಕಲ್ ಸಹೋದರಿಯರು ಇಂದಿಗೂ ಉಳಿಸಿಕೊಂಡಿದ್ದಾರೆ.
ತಮ್ಮ ತಂದೆಯ ಸ್ಮರಣೆಯನ್ನು ಜೀವಂತವಾಗಿರಿಸಲು, ಸರಳಾ ಸೋಕಲ್ ಗುಜರಾತ್‌ನ ಸಾಬರಮತಿ ಆಶ್ರಮಕ್ಕೆ ನೂಲುವ ಚಕ್ರದ ಜೊತೆಗೆ ಗಾಂಧಿ ಸಾಹಿತ್ಯ ಪ್ರಚಾರಕ್ಕಾಗಿ ಒಂದು ಸಾವಿರ ಪುಸ್ತಕಗಳನ್ನು ದಾನ ಮಾಡಿದ್ದಾರೆ.
ಇದನ್ನೂ ಓದಿ: ಸುಭಾಷ್ ಚಂದ್ರ ಬೋಸರಿಗೆ ಬ್ರಿಟೀಷರ ಬ್ರೇಕ್‌ಫಾಸ್ಟ್ ಬ್ರೆಡ್ ಇಷ್ಟವಾಗಿತ್ತು, ಯಾಕೆ ಗೊತ್ತೇ?