ತಿರುವಳ್ಳೂರು (ತಮಿಳುನಾಡು): ಎಂಟು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 75 ವರ್ಷದ ವೃದ್ಧ ಹಾಗೂ ಈ ಕೃತ್ಯದ ವಿಡಿಯೋವನ್ನು ವಾಟ್ಸ್ಆ್ಯಪ್ನಲ್ಲಿ ಐವರು ಯುವಕರು ಶೇರ್ ಮಾಡಿರುವ ನೀಚ ಕೃತ್ಯ ತಮಿಳುನಾಡಿನ ತಿರುವಳ್ಳೂರಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಈಗಾಗಲೇ ಆರೋಪಿ ವೃದ್ಧ ಸೇರಿ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಮೂರು ತಿಂಗಳ ಹಿಂದೆ ಬಾಲಕಿಗೆ ವೃದ್ಧ ಲೈಂಗಿಕ ಕಿರುಕುಳ ನೀಡಿದ್ದ. ಜುಲೈ 24 ರಂದು ಹಾವು ಕಡಿತದಿಂದ ಆ ಬಾಲಕಿ ಸಾವನ್ನಪ್ಪಿದ್ದರು. ಆದರೆ, ಐವರು ಯುವಕರು ಆ ವೃದ್ಧನ ಕೃತ್ಯವನ್ನು ಆತನಿಗೆ ತಿಳಿಯದಂತೆ ಚಿತ್ರೀಕರಿಸಿದ್ದರು ಎನ್ನಲಾಗಿದೆ. ಅಲ್ಲದೇ, ಬಾಲಕಿಯನ್ನು ಈತನೇ ಕೊಲೆ ಮಾಡಿರಬಹುದು ಎಂಬ ಶಂಕೆಯಿಂದ ವಿಡಿಯೋ ಕ್ಲಿಪ್ನ್ನು ಬಿಡುಗಡೆ ಮಾಡಿದ್ದರು ಎಂದು ತಿಳಿದು ಬಂದಿದೆ.
ಈ ವಿಡಿಯೋ ಹೊರ ಬಂದ ಬಳಿಕ ಸಂತ್ರಸ್ತ ಬಾಲಕಿಯ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ಅಂತೆಯೇ, ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವಯೋವೃದ್ಧ ಬಾಲು ಹಾಗೂ ಅಶ್ಲೀಲ ವಿಡಿಯೋ ಶೇರ್ ಮಾಡಿದ್ದ ಕಣ್ಣನ್, ಸತೀಶ್, ವಿಜಯಕುಮಾರ್, ರಮೇಶ್, ಬಾಸ್ಕರ್ ಎಂಬ ಐವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿಯ ತಂದೆ 5 ವರ್ಷಗಳ ಹಿಂದೆ ಮೃತಪಟ್ಟಿದ್ದು, ಚಿಕ್ಕಪ್ಪನ ಕುಟುಂಬದವರು ಆಕೆಯನ್ನು ನೋಡಿಕೊಳ್ಳುತ್ತಿದ್ದರು. ಅಲ್ಲದೇ, ಕೃತ್ಯದ ವಿಡಿಯೋ ಹೊಂದಿದ್ದ ಯುವಕರು ವೃದ್ಧನಿಗೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂಬುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸದ್ಯ ಬಾಲಕಿ ಮೃತಪಟ್ಟ ನಂತರ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದ ಕಾರಣ ಈ ಪ್ರಕರಣವನ್ನು ಅಂಬತ್ತೂರು ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಅಲ್ಲದೇ, ಬಂಧಿತ 6 ಮಂದಿಯನ್ನು ತಿರುವಳ್ಳೂರು ಜಿಲ್ಲಾ ಮಹಿಳಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಜೊತೆಗೆ ವೃದ್ಧ ಸೇರಿದಂತೆ 6 ಮಂದಿಯನ್ನು ನ್ಯಾಯಾಲಯವು ಪುಝಲ್ ಜೈಲಿಗೆ ಕಳುಹಿಸಿದೆ.
ಇದನ್ನೂ ಓದಿ: 10 ವರ್ಷಗಳಿಂದ ನಿರಂತರ ಲೈಂಗಿಕ ಕಿರುಕುಳ: 8 ಆರೋಪಿಗಳ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು