ಮುಂಬೈ (ಮಹಾರಾಷ್ಟ್ರ): ಹ್ಯೂಮನ್ಸ್ ಆಫ್ ಬಾಂಬೆ ಫೇಸ್‍ಬುಕ್ ಪುಟ ವಿಶೇಷವಾಗಿ ಫೋಟೋಗ್ರಫಿ ಮತ್ತು ಜೀವನಚರಿತ್ರೆಗಳ ಕುರಿತ ಮಾಹಿತಿಯನ್ನು ಹಂಚಿಕೊಳ್ಳುತ್ತದೆ. ಇದೀಗ ಮುಂಬೈನಲ್ಲಿ ನೆಲೆಸಿರುವ ಆಟೋ ಚಾಲಕರೊಬ್ಬರಿಗೆ ಧನ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಹಿಮಾಚಲ ಪ್ರದೇಶ ಮೂಲದ ದೇಶರಾಜ್ ಸಿಂಗ್ (74) ಅವರು ಅರ್ಥಿಕವಾಗಿ ಭಾರೀ ಸಮಸ್ಯೆ ಎದುರಿಸುತ್ತಿದ್ದರು. ಈ ಹಿನ್ನೆಲೆ ಹ್ಯೂಮನ್ಸ್ ಆಫ್ ಬಾಂಬೆ ಫೇಸ್‍ಬುಕ್ ಪುಟ ಆಟೋ ಡ್ರೈವರ್ ದೇಶರಾಜ್ ಅವರ ಪ್ರೊಫೈಲ್ ಅನ್ನು ರಚಿಸಿ, ಫೇಸ್‍ಬುಕ್ ಪುಟದಲ್ಲಿ ಹಂಚಿಕೊಂಡಿತ್ತು. ಬಳಿಕ ಆಟೋ ಚಾಲಕನ ಹೋರಾಟದ ಕಥೆ ವೈರಲ್ ಆಗಿದ್ದು, ಜನತೆ ಬಡ ಆಟೋ ಚಾಲಕನಿಗೆ ಸಹಾಯ ಹಸ್ತ ಚಾಚಿದ್ದಾರೆ.
ದೇಶರಾಜ್ ಅವರಿಗೆ ಸಹಾಯ ಮಾಡುವ ಉದ್ದೇಶದಿಂದ ಹ್ಯೂಮನ್ಸ್ ಆಫ್ ಬಾಂಬೆ ಫೇಸ್‍ಬುಕ್ ಪುಟ ಆನ್‌ಲೈನ್ ದೇಣಿಗೆ ಸಂಗ್ರಹ ಅಭಿಯಾನವನ್ನು ಕೈಗೊಂಡಿತ್ತು. ಅಲ್ಪಾವಧಿಯಲ್ಲಿ ಕ್ರೌಡ್ ಫಂಡಿಂಗ್ ಮೂಲಕ ಒಟ್ಟು 24 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ, ದೇಶರಾಜ್ ಅವರಿಗೆ ಹಸ್ತಾಂತರಿಸಲಾಗಿದೆ. ಈ ಮೂಲಕ ಬಡ ವೃದ್ಧನ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.
ಒಟ್ಟಿನಲ್ಲಿ ಹ್ಯೂಮನ್ಸ್ ಆಫ್ ಬಾಂಬೆಯ ಇಂಪ್ಯಾಕ್ಟ್ ಬಹು ದೊಡ್ಡದಿದೆ. ಜಗತ್ತಿನಾದ್ಯಂತ ಕೋಟ್ಯಂತರ ಜನ ಇದನ್ನು ನೋಡುತ್ತಾರೆ. ಇಲ್ಲಿ ಸ್ಫೂರ್ತಿಯ ಕಥೆಗಳಿವೆ, ಕಣ್ಣೀರಿನ ಕಥೆಗಳಿವೆ. ದಿಟ್ಟತನ, ಮುಜುಗರ, ಕಸಿವಿಸಿ, ಸಂತೋಷ, ಆನಂದ, ಸಿಹಿ-ಕಹಿ, ಹೀಗೆ ಎಲ್ಲ ಬಗೆಯ ಕಥೆಗಳನ್ನು ಪ್ರಕಟಿಸಲಾಗುತ್ತದೆ. ಜೊತೆಗೆ ಈ ಪುಟಕ್ಕೆ ಕೋಟ್ಯಂತರ ಅಭಿಮಾನಿಗಳಿದ್ದಾರೆ.