ಶ್ರೀನಗರ (ಜಮ್ಮು-ಕಾಶ್ಮೀರ): ಜಮ್ಮು - ಕಾಶ್ಮೀರದಲ್ಲಿ 9 ವಾರಗಳ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮಕ್ಕೆ 70 ಕೇಂದ್ರ ಸಚಿವರು ಆಗಮಿಸಲಿದ್ದಾರೆ. ಸೆಪ್ಟೆಂಬರ್ 10 ರಿಂದ ಪ್ರತಿ ವಾರ ಕೇಂದ್ರಾಡಳಿತ ಪ್ರದೇಶಕ್ಕೆ ಸಚಿವರ ತಂಡ ಭೇಟಿ ನೀಡಲಿದೆ.
ಪಂಚಾಯಿತಿ ಸದಸ್ಯರು, ಸ್ಥಳೀಯರ ಜತೆ ತಂಡವು ಸಂವಾದ ನಡೆಸಲಿದೆ. ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಸಂವಾದ ನಡೆಸಿದ ಬಳಿಕ ಸಚಿವರು ವಿಸ್ತೃತ ವರದಿಯನ್ನು ಗೃಹ ಸಚಿವಾಲಯ ಮತ್ತು ಪ್ರಧಾನಿ ಕಚೇರಿಗೆ ಕಳುಹಿಸಬೇಕಿದೆ.
ಮುಂದಿನ ದಿನಗಳಲ್ಲಿ ಸಂವಾದ ನಡೆಸಲು ಯಾರ್ಯಾರು, ಯಾವ್ಯಾವ ದಿನ ತೆರಳಬೇಕು ಎಂಬ ವೇಳಾಪಟ್ಟಿಯನ್ನು ಪ್ರಧಾನಮಂತ್ರಿ ಕಚೇರಿ ಬಿಡುಗಡೆಗೊಳಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಸದ್ಯದ ಮಾಹಿತಿಗಳ ಪ್ರಕಾರ, ಪ್ರತಿವಾರ ಕೇಂದ್ರಾಡಳಿತ ಪ್ರದೇಶಕ್ಕೆ ಎಂಟು ಮಂತ್ರಿಗಳ ತಂಡ ಭೇಟಿ ನೀಡಲಿದೆ. ಜಮ್ಮು ಮತ್ತು ಕಾಶ್ಮೀರ ವಿಭಾಗಗಳಿಗೆ ತಲಾ ನಾಲ್ಕು ಜನರನ್ನು ಕಳುಹಿಸಲಾಗುತ್ತದೆ.
ಕ್ಯಾಬಿನೆಟ್ನ ಹಿರಿಯ ಮಂತ್ರಿಗಳು ಕೂಡ ಈ ಕಾರ್ಯಕ್ರಮದ ಭಾಗವಾಗಿರುತ್ತಾರೆ. 2021 ರ ಜುಲೈನಲ್ಲಿ ಸಂಪುಟ ಪುನಾರಚನೆ ಬಳಿಕ ಹೊಸ ಮಂತ್ರಿಗಳು ಮೊದಲ ಬಾರಿಗೆ ಕಣಿವೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.
ಇದನ್ನೂ ಓದಿ: ಜಾತಿಗಣತಿಗೆ ಸಂಬಂಧಿಸಿದ ವಿಷಯಗಳ ಅಧ್ಯಯನಕ್ಕಾಗಿ ಸಮಿತಿ ರಚಿಸಿದ ಕಾಂಗ್ರೆಸ್
ಕೆಲ ಮಂತ್ರಿಗಳ ಖಾತೆಗಳಿಗೆ ಸಂಬಂಧಿಸಿದಂತೆ ಪ್ರದೇಶಗಳನ್ನು ವಹಿಸಲಾಗುತ್ತದೆ. ಉದಾಹರಣೆಗೆ ಕೃಷಿ ಮಂತ್ರಿಗಳು ಕೃಷಿ ಪ್ರದೇಶಗಳನ್ನು, ಗ್ರಾಮೀಣ ಅಭಿವೃದ್ಧಿ ಮಂತ್ರಿ ಗ್ರಾಮೀಣ ಪ್ರದೇಶಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಲಿದ್ದಾರೆ.