ತಿರುವನಂತಪುರ : ಇಸ್ರೇಲ್‌ನಲ್ಲಿ ಕೇರಳದ 6 ಯಾತ್ರಾರ್ಥಿಗಳು ನಾಪತ್ತೆಯಾದ ಪ್ರಕರಣದ ಬೆನ್ನಲ್ಲೇ, ಕೇರಳದಿಂದ ಇಸ್ರೇಲ್‌ಗೆ ಸುಧಾರಿತ ಕೃಷಿ ತಂತ್ರಜ್ಞಾನದ ಕುರಿತು ಅಧ್ಯಯನ ನಡೆಸಲು ತೆರಳಿದ್ದ ರಾಜ್ಯ ಸರ್ಕಾರ ನಿಯೋಗದ ಸದಸ್ಯರೊಬ್ಬರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ನಾಪತ್ತೆಯಾದ ವ್ಯಕ್ತಿಯನ್ನು ಕಣ್ಣೂರಿನ ಬಿಜು ಕುರಿಯನ್ (48) ಎಂದು ಗುರುತಿಸಲಾಗಿದೆ.
ಕಳೆದ ಫೆ.12ರಂದು ಕೇರಳ ಸರ್ಕಾರವು ಕೃಷಿ ತಂತ್ರಜ್ಞಾನಗಳ ಅಧ್ಯಯನಕ್ಕಾಗಿ 27 ಜನರ ನಿಯೋಗವನ್ನು ಇಸ್ರೇಲ್‌ಗೆ ಕಳುಹಿಸಿತ್ತು. ಈ ನಿಯೋಗದಲ್ಲಿ ಬಿಜು ಕುರಿಯನ್ ಕೂಡ ಇದ್ದರು. ಇಸ್ರೇಲ್‌ಗೆ ತಲುಪಿದ್ದ ನಿಯೋಗದ ಸದಸ್ಯರು ಇಲ್ಲಿನ ಹರ್ಜ್ಲಿಯಾದಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಇಲ್ಲಿನ ಹೋಟೆಲ್‌ನಿಂದ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಆಯೋಗದ ಸದಸ್ಯರು ಇಸ್ರೇಲ್ ಪೊಲೀಸರಿಗೆ ದೂರು ನೀಡಿದ್ದರು. ನಾಪತ್ತೆಯಾದ ವ್ಯಕ್ತಿಗಾಗಿ ಪೊಲೀಸ್ ತಂಡ ಹುಡುಕಾಟ ಆರಂಭಿಸಿತ್ತು. ಆದರೆ ಇನ್ನೂ ಬಿಜು ಕುರಿಯನ್ ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಆದರೆ ಬಿಜು ಕುರಿಯನ್ ತನ್ನ ಪತ್ನಿಗೆ ಸಂದೇಶ ಕಳುಹಿಸಿದ್ದು, ನಾನು ಸುರಕ್ಷಿತವಾಗಿದ್ದೇನೆ. ನನಗಾಗಿ ಹುಡುಕಾಟ ನಡೆಸುವ ಅಗತ್ಯವಿಲ್ಲ. ನನಗೆ ಭಾರತಕ್ಕೆ ಮರಳಲು ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ. ಇನ್ನು ಪರಾರಿಯಾಗಿರುವ ಬಗ್ಗೆ ಕಾರಣವನ್ನು ಬಹಿರಂಗಪಡಿಸಿಲ್ಲ ತಿಳಿದುಬಂದಿದೆ.
ಫೆ. 21ರಂದು ರಾಜ್ಯ ಆಯೋಗವು ಮರಳಿ ಕೊಚ್ಚಿಗೆ ಆಗಮಿಸಿದೆ. ನಾವು ಊಟಕ್ಕೆ ಹೋದಾಗ ಬಿಜು ಕುರಿಯನ್ನಾಪತ್ತೆಯಾಗಿದ್ದಾರೆ. ಬಳಿಕ ಬಿಜು ಕುರಿಯನ್ ಫೋನ್ ಸ್ವಿಚ್ ಆಫ್ ಆಗಿತ್ತು. ನಾಪತ್ತೆ ಆದ ದಿನವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಪತ್ತೆ ಕಾರ್ಯ ಮುಂದುವರೆಸಿದ್ದು, ಇನ್ನೂ ಪತ್ತೆಯಾಗಿಲ್ಲ ಎಂದು ಸಹ ಸದಸ್ಯರು ಹೇಳಿದ್ದಾರೆ.
ಘಟನೆ ಸಂಬಂಧ ಬಿಜು ಕುರಿಯನ್ ಅವರ ವೀಸಾ ರದ್ದುಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಕೃಷಿ ಸಚಿವ ಪಿ. ಪ್ರಸಾದ್ ಹೇಳಿದ್ದಾರೆ. ಈ ಬಗ್ಗೆ ಬಿಜು ಕುರಿಯನ್ ಅವರ ಕುಟುಂಬದವರು ಇನ್ನೂ ದೂರು ನೀಡಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಬಿಜು ಕುರಿಯನ್ ಕೆಲಸ ಹುಡುಕಿಕೊಂಡು ಇಸ್ರೇಲ್‌ನಿಂದ ನಾಪತ್ತೆಯಾಗಿದ್ದಾರೆ ಎಂಬ ಸುಳಿವು ಸಿಕ್ಕಿದೆ. ಈ ಬಗ್ಗೆ ಅವರ ಸ್ನೇಹಿತರಿಂದ ಅಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ. ಇಸ್ರೇಲ್‌ನಲ್ಲಿ ಕೂಲಿ ಕೆಲಸ ಮಾಡಿದರೆ ದಿನಕ್ಕೆ 15 ಸಾವಿರ ರೂಪಾಯಿ ಸಿಗುತ್ತದೆ. ಇದು ಕೃಷಿ ಕೆಲಸಕ್ಕಿಂತ ಲಾಭದಾಯಕ ಎಂದು ಬಿಜು ಹೇಳಿಕೊಂಡಿದ್ದರು ಎಂದು ನಿಯೋಗದಲ್ಲಿದ್ದ ಸುಜಿತ್ ಹೇಳಿದರು. ಹೀಗಾಗಿ ಪರಾರಿಯಾಗಿರಬಹುದೆಂದು ಅಂದಾಜಿಸಲಾಗಿದೆ.
ಇಸ್ರೇಲ್‌ಗೆ ತೆರಳಿದ್ದ ಕೇರಳದ 26 ಕ್ರಿಶ್ಚಿಯನ್ ಯಾತ್ರಾರ್ಥಿಗಳ ಪೈಕಿ 6 ಮಂದಿ ನಾಪತ್ತೆಯಾಗಿದ್ದ ಬಗ್ಗೆ ವರದಿಯಾಗಿತ್ತು. ಪ್ರವಾಸದ ನೇತೃತ್ವ ವಹಿಸಿದ್ದ ಮಲಂಕರ ಕ್ಯಾಥೋಲಿಕ್ ಚರ್ಚ್‌ನ ಪಾದ್ರಿ ಫಾದರ್ ಜಾರ್ಜ್ ಜೋಶುವಾ ಅವರು ಈ ಬಗ್ಗೆ ಡಿಜಿಪಿಗೆ ದೂರು ನೀಡಿದ್ದರು.
ಕಳೆದ ಫೆ.8ರಂದು ಫಾದರ್ ಜಾರ್ಜ್ ಜೋಶುವಾ ಮತ್ತು 26 ಯಾತ್ರಾರ್ಥಿಗಳ ತಂಡವು ಇಸ್ರೇಲ್‌ಗೆ ತೆರಳಿತ್ತು.ಈ ತಂಡವು ಈಜಿಪ್ಟ್, ಜೋರ್ಡಾನ್ನಲ್ಲಿ ಯಾತ್ರೆ ಮುಗಿಸಿ ಬಳಿಕ ಫೆ.11 ರಂದು ಇಸ್ರೇಲ್‌ಗೆ ಆಗಮಿಸಿತ್ತು. ಈ ವೇಳೆ ಯಾತ್ರಾರ್ಥಿಗಳ ತಂಡವು ಉಳಿದುಕೊಂಡಿದ್ದ ಹೋಟೆಲ್‌ನಿಂದ ಆರು ಮಂದಿ ನಾಪತ್ತೆಯಾಗಿದ್ದರು.
ಫೆ.14ರಂದು ಮೂವರು ಹಾಗೂ ಪೆ.15ರಂದು ಬೆಳಗ್ಗೆ ಮೂವರು ಹೋಟೆಲ್‌ನಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಪರಾರಿಯಾದವರಲ್ಲಿ 69 ವರ್ಷದ ಮಹಿಳೆ ಕೂಡ ಇದ್ದಾರೆ. ಪರಾರಿಯಾದವರನ್ನು ಶೈನಿ ರಾಜು, ರಾಜು ಥಾಮಸ್, ಮರ್ಸಿ ಬೇಬಿ, ಅನ್ನಿ ಥಾಮಸ್, ಸೆಬಾಸ್ಟಿಯನ್, ಲೂಸಿ ರಾಜು ಮತ್ತು ಕಮಲಂ ಎಂದು ಗುರುತಿಸಲಾಗಿದೆ. ಈ ಬಗ್ಗೆ ಫಾದರ್ ಜಾರ್ಜ್ ಜೋಶುವಾ ಅವರು ಇಸ್ರೇಲ್ ಇಮಿಗ್ರೇಷನ್ ಪೊಲೀಸ್ ಮತ್ತು ಇಸ್ರೇಲಿ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಆರು ಮಂದಿ ತಮ್ಮ ಪಾಸ್‌ಪೋರ್ಟ್‌ಗಳನ್ನು ವಾಪಸ್ ಪಡೆಯದೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಪತ್ತನಂತಿಟ್ಟ ಜಿಲ್ಲೆಯ ಇಮ್ಯಾನುಯೆಲ್ ಹಾಲಿಡೇಸ್ ಎಂಬ ಟ್ರಾವೆಲ್ ಏಜೆನ್ಸಿ ಯಾತ್ರಾರ್ಥಿಗಳ ಪ್ರವಾಸಕ್ಕೆ ಬೇಕಾದ ಸೌಕರ್ಯಗಳನ್ನು ಮಾಡಿಕೊಟ್ಟಿತ್ತು. ಫೆ.19ರಂದು ಉಳಿದ ಯಾತ್ರಾರ್ಥಿಗಳ ತಂಡ ತವರಿಗೆ ವಾಪಸಾಗಿದ್ದು, ಈ ಬಗ್ಗೆ ಡಿಜಿಪಿಗೆ ಫಾದರ್ ಜಾರ್ಜ್ ಜೋಶುವಾ ದೂರು ಸಲ್ಲಿಸಿದ್ದಾರೆ. ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದೆ.
ಇದನ್ನೂ ಓದಿ : ವಯಸ್ಸು 24, ದೇಹ ತೂಕ 240! ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಬಳಿಕ 70 ಕೆಜಿ ಇಳಿಕೆ