ನವದೆಹಲಿ: ಭಾರತೀಯ ಮೂಲದ ಕಂಪನಿ ತಯಾರಿಸಿದ ಕೆಮ್ಮು, ಶೀತಕ್ಕೆ ನೀಡುವ ಔಷಧಿ ಸೇವಿಸಿ ಆಫ್ರಿಕಾದ 66 ಮಕ್ಕಳು ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅನುಮಾನಿಸಿದ್ದು, ತಕ್ಷಣವೇ ತನಿಖೆ ನಡೆಸಲು ಕೇಂದ್ರ ಔಷಧ ನಿಯಂತ್ರಕ ಮಂಡಳಿ(ಸಿಡಿಎಸ್ಸಿಒ)ಗೆ ಸೂಚಿಸಿದೆ.
ದೆಹಲಿ ಮೂಲದ ಖಾಸಗಿ ಕಂಪನಿ ಈ ಔಷಧವನ್ನು ತಯಾರಿಸಿದ್ದು, ಇದನ್ನು ಆಫ್ರಿಕಾದ ಗ್ಯಾಂಬಿಯಾಗೆ ರಫ್ತು ಮಾಡಿತ್ತು. ಆ ಸಿರಪ್ ಕುಡಿದ 66 ಮಕ್ಕಳು ಮೂತ್ರಪಿಂಡ ಸೋಂಕಿಗೆ ಗುರಿಯಾಗಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಶಂಕಿಸಿದೆ. ಆದ್ದರಿಂದ ತಕ್ಷಣವೇ ಕಂಪನಿ ತಯಾರಿಸುವ 4 ಸಿರಪ್ಗಳ ಮೇಲೆ ತನಿಖೆ ನಡೆಸಲು ಕೋರಿದೆ.
ವಿಶ್ವ ಆರೋಗ್ಯ ಸಂಸ್ಥೆ ಸೂಚನೆಯ ಮೇರೆಗೆ ತನಿಖೆ ಆರಂಭಿಸಿರುವ ಭಾರತದ ಔಷಧ ನಿಯಂತ್ರಕ ಮಂಡಳಿ. ಶೀಘ್ರವೇ ವರದಿಯನ್ನು ನೀಡಲಾಗುವುದು ಎಂದಿದೆ.
ಭಾರತೀಯ ಮೂಲದ ಕಂಪನಿ ತಯಾರಿಸಿರುವ ಸಿರಪ್ನಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ವಿಶ್ಲೇಷಣೆಯಿಂದ ದೃಢಪಟ್ಟಿದೆ. ಇದರ ಸೇವನೆಯಿಂದ ಮಕ್ಕಳು ಕಿಡ್ನಿ ಸೋಂಕಿನಿಂದ ಬಳಲಿ ಸಾವನ್ನಪ್ಪಿರಬಹುದು ಎಂದು ಅಂದಾಜಿಸಿದೆ.
ಈ ಕಂಪನಿಯು ದೆಹಲಿ, ಹರಿಯಾಣದಲ್ಲಿ ಉತ್ಪನ್ನಗಳನ್ನು ತಯಾರಿಸುತ್ತಿದೆ. ಇದಕ್ಕೆ ರಾಜ್ಯ ಔಷಧ ನಿಯಂತ್ರಕರಿಂದ ಪರವಾನಗಿ ಪಡೆದಿದೆ. ಕಂಪನಿಯು ಈ ಉತ್ಪನ್ನಗಳನ್ನು ಇಲ್ಲಿಯವರೆಗೆ ಗ್ಯಾಂಬಿಯಾಕ್ಕೆ ಮಾತ್ರ ತಯಾರಿಸಿ ರಫ್ತು ಮಾಡಿದೆ ಎಂದು ತಿಳಿದುಬಂದಿದೆ.
ಔಷಧವನ್ನು ಆಮದು ಮಾಡಿಕೊಳ್ಳುವ ದೇಶಗಳು ಅದರ ಗುಣಮಟ್ಟವನ್ನು ಪರೀಕ್ಷಿಸಿದ ಬಳಿಕವೇ ಪಡೆಯುತ್ತವೆ. ಆಫ್ರಿಕಾದ ಗ್ಯಾಂಬಿಯಾ ಕೂಡ ಔಷಧವನ್ನು ಬಳಕೆಗೆ ನೀಡುವ ಮೊದಲು ಪರೀಕ್ಷಿಸಿ ಉತ್ಪನ್ನವನ್ನು ಆಮದು ಮಾಡಿಕೊಂಡಿದೆ. ಔಷಧಿಯ ಬಗ್ಗೆ ಆ ದೇಶ ತೃಪ್ತಿ ವ್ಯಕ್ತಪಡಿಸಿತ್ತು ಎಂದು ಕಂಪನಿಯ ಮೂಲವೊಂದು ತಿಳಿಸಿದೆ.
ಓದಿ: ದುರ್ಗಾ ದೇವಿ ನಿಮಜ್ಜನ ವೇಳೆ ಹಠಾತ್ ಪ್ರವಾಹ.. ನದಿ ನೀರಲ್ಲಿ ಕೊಚ್ಚಿಹೋದ 7 ಮಂದಿ