ಮಾನ್ಸಾ (ಪಂಜಾಬ್): ಮಾನ್ಸಾ ಜಿಲ್ಲೆಯ ಕೋಟ್ಲಿ ಗ್ರಾಮದಲ್ಲಿ ತಂದೆಯ ಎದುರೇ 6 ವರ್ಷದ ಬಾಲಕನ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಗಳು ಬೈಕ್ನಲ್ಲಿ ಬಂದು ಬಾಲಕನಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಪೊಲೀಸರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಘಟನೆ ನಡೆದಿದ್ದು ಹೇಗೆ?: ಮಾಹಿತಿಯ ಪ್ರಕಾರ, ನಿವಾಸಿ ಜಸ್ಪ್ರೀತ್ ಸಿಂಗ್ ತನ್ನ ಮಗ ಮತ್ತು ಮಗಳೊಂದಿಗೆ ಮನೆಗೆ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಅಪರಿಚಿತರು ಅವರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು. ಪರಿಣಾಮ ಜಸ್ಪ್ರೀತ್ ಅವರ ಪುತ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದುಷ್ಕರ್ಮಿಗಳು ತಂದೆಯತ್ತ ಗುರಿ ಇಟ್ಟಿದ್ದರು. ಆದರೆ, ಗುಂಡುಗಳು ಮಗುವಿಗೆ ತಗುಲಿವೆ. ಇದರಿಂದ ಆರು ವರ್ಷದ ಮುಗ್ಧ ಬಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಗುಂಡು ತಗುಲಿದ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರು ಬಾಲಕ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಇಬ್ಬರು ಅಪರಿಚಿತ ಯುವಕರು ಬಂದು ಏಕಾಏಕಿ ಗುಂಡು ಹಾರಿಸಿದ್ದಾರೆ ಎಂದು ತಂದೆ ಜಸ್ಪ್ರೀತ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಾಂಸ ವ್ಯಾಪಾರಿಗಳನ್ನು ಥಳಿಸಿ ಮೂತ್ರ ವಿಸರ್ಜನೆ; ಮೂವರ ಪೊಲೀಸರು ಅಮಾನತು
ಮುಗಿಲು ಮುಟ್ಟಿದ ಮೃತ ಬಾಲಕನ ಕುಟುಂಬಸ್ಥರ ಆಕ್ರಂದನ: ಘಟನೆಯ ನಂತರ, ಜಸ್ಪ್ರೀತ್ ಕುಟುಂಬವು ತೀವ್ರ ಆಘಾತಕ್ಕೆ ಒಳಗಾಗಿದೆ. ಅವರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತರ ಕುಟುಂಬಸ್ಥರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಈ ಕೃತ್ಯ ಎಸಗಿದವರು ಯಾರೊಂದು ತಿಳಿದಿಲ್ಲ. ನಮ್ಮ ಮೇಲೆ ಯಾರಿಗೂ ದ್ವೇಷವಿಲ್ಲ. ಆದರೆ, ತಮ್ಮ ಅಮಾಯಕ ಮಗುವನ್ನು ಏಕಾಏಕಿ ಕೊಲೆ ಮಾಡಲಾಗಿದೆ ಎಂದು ಮೃತ ಬಾಲಕನ ಕುಟುಂಬಸ್ಥರು ಕಣ್ಣೀರು ಹಾಕಿದರು.
ಇದನ್ನೂ ಓದಿ: 400 ಅಂಗಡಿಗಳಿದ್ದ ಕಾಂಪ್ಲೆಕ್ಸ್ನಲ್ಲಿ ಭಾರಿ ಅಗ್ನಿ ಅವಘಡ; ನಾಲ್ವರು ಯುವತಿಯರು ಸೇರಿ 6 ಸಾವು
ಹತ್ಯೆಕೋರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ: ಹತ್ಯೆ ಮಾಡಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಾಲಕನ ಸಂಬಂಧಿಕರು ಒತ್ತಾಯಿಸಿದರು. ಗುಂಡಿನ ದಾಳಿ ನಡೆಸಿದ ನಂತರ ದುಷ್ಕರ್ಮಿಗಳು ಗ್ರಾಮದ ಕಡೆಗೆ ಓಡಿ ಹೋಗಿದ್ದಾರೆ. ದಾಳಿಕೋರರು ಗ್ರಾಮದವರು ಎಂದು ಶಂಕಿಸಲಾಗಿದೆ. ಪೊಲೀಸರು ಕೋಟ್ಲಿ ಗ್ರಾಮದಲ್ಲಿ ಹೈ ಅಲರ್ಟ್ ಘೋಷಿಸಿದ್ದಾರೆ. ವಿಷಯ ತಿಳಿದ ತಕ್ಷಣವೇ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಹತ್ಯೆ ಆರೋಪಿಗಳ ಬಂಧನಕ್ಕೆ ಕ್ರಮ: ಸಿವಿಲ್ ಆಸ್ಪತ್ರೆಗೆ ಆಗಮಿಸಿದ ಮಾನಸಾ ಪೊಲೀಸ್ ಅಧಿಕಾರಿ ನಾನಕ್ ಸಿಂಗ್ ಮಾತನಾಡಿ, ಗ್ರಾಮದಲ್ಲಿ ಈಗಾಗಲೇ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೊಲೆ ಮಾಡಿದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಕಚೇರಿ ಅಧಿಕಾರಿ ಎಂದು ಸುಳ್ಳು ಹೇಳಿ ಬುಲೆಟ್ ಪ್ರೂಫ್ ವಾಹನ, ಭದ್ರತೆ ಪಡೆದ ಗುಜರಾತ್ ವ್ಯಕ್ತಿ ಸೆರೆ!