ಸೇಲಂ (ತಮಿಳುನಾಡು) : ಹೆದ್ದಾರಿ ಬದಿ ನಿಂತಿದ್ದ ಲಾರಿಗೆ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಈರೋಡ್ ಜಿಲ್ಲೆಯ ಎಂಗೂರು ಗುಟ್ಟಪಾಲಯಂ ನಿವಾಸಿಗಳಾದ ಪಳನಿಸ್ವಾಮಿ, ಪತ್ನಿ ಪಾಪಪತಿ, ಪಾಪಪತಿ ಸೋದರಳಿಯ ಆರ್ಮುಗಂ, ಆರ್ಮುಗಂ ಪತ್ನಿ ಮಂಜುಳಾ, ಸೋದರ ಸಂಬಂಧಿ ಸೆಲ್ವರಾಜ್, ಮಗು ಸಂಜನಾ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಪ್ರಿಯಾ ರಾಜದೊರೈ ಮತ್ತು ವಿಘ್ನೇಶ್ ಎಂಬವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೆಪ್ಟೆಂಬರ್ 5ರಂದು ಪಳನಿಸ್ವಾಮಿ ಮತ್ತು ಕುಟುಂಬಸ್ಥರು ಸೇಲಂನಲ್ಲಿರುವ ತನ್ನ ಮಗಳ ಮನೆಗೆ ತೆರಳಿದ್ದರು. ಬಳಿಕ ಇಂದು ಬೆಳಗ್ಗೆ ಸೇಲಂನಿಂದ ಪೆರುಂದುರೈಗೆ ಮಗಳು ಮತ್ತು ಮೊಮ್ಮಗಳೊಂದಿಗೆ ಹಿಂತಿರುಗುತ್ತಿದ್ದರು. ಈ ವೇಳೆ ಸೇಲಂ - ಕೊಯಂಬತ್ತೂರು ರಾಷ್ಟ್ರೀಯ ಹೆದ್ದಾರಿಯ ಕೌಂಡನೂರು ಬಳಿ ರಸ್ತೆ ಬದಿ ನಿಂತಿದ್ದ ಲಾರಿಗೆ ಕಾರು ಹಿಂದಿನಿಂದ ಬಂದು ಗುದ್ದಿದೆ. ಇದರ ಪರಿಣಾಮ ಕಾರಿನಲ್ಲಿದ್ದ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸಂಗಕಿರಿ ಪೊಲೀಸರು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮೃತದೇಹಗಳನ್ನು ಸಂಗಕಿರಿ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗೂಡ್ಸ್ ವಾಹನ ನದಿಗೆ ಉರುಳಿ ನಾಲ್ವರು ಸಾವು : ಗೂಡ್ಸ್ ವಾಹನವೊಂದು ನದಿಗೆ ಉರುಳಿ ಮಹಿಳೆ ಸೇರಿ ನಾಲ್ವರು ಸಾವನ್ನಪ್ಪಿರುವ ಘಟನೆ ಛತ್ತೀಸ್ಗಢದ ದುರ್ಗ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಶಿವನಾಥ್ ನದಿಗೆ ಗೂಡ್ಸ್ ವಾಹನ ಉರುಳಿಬಿದ್ದ ಪರಿಣಾಮ ಒಬ್ಬ ಮಹಿಳೆ, ಒಬ್ಬ ಪುರುಷ ಮತ್ತು ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಎಸ್ಡಿಆರ್ಎಫ್ ತಂಡವು ಆರು ಘಂಟೆಗಳ ಕಾರ್ಯಾಚರಣೆ ನಡೆಸಿ ವಾಹನವನ್ನು ಮತ್ತು ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ. ಕ್ರೇನ್ನ ಸಹಾಯದಿಂದ ವಾಹನವನ್ನು ಮೇಲೆತ್ತಲಾಯಿತು.
ಈ ಬಗ್ಗೆ ಮಾಹಿತಿ ನೀಡಿದ ಪುಲ್ಗಾಂವ್ ಪೊಲೀಸ್ ಅಧಿಕಾರಿ, ಈ ಘಟನೆಯು ಮಂಗಳವಾರ ರಾತ್ರಿ ನಡೆದಿರುವ ಸಾಧ್ಯತೆ ಇದೆ. ಶಿವನಾಥ್ ನದಿಯ ಹಳೆ ಸೇತುವೆಯಿಂದ ಗೂಡ್ಸ್ ವಾಹನ ನೀರಿಗೆ ಬಿದ್ದಿದೆ. ಈ ಗೂಡ್ಸ್ ವಾಹನವು ಅಂಜೋರಾದಿಂದ ದುರ್ಗ ಕಡೆಗೆ ಬರುತ್ತಿತ್ತು. ವಾಹನದಲ್ಲಿ ಒಟ್ಟು ಐವರು ಇದ್ದರು ಎಂದು ತಿಳಿದು ಬಂದಿದೆ. ಮತ್ತೋರ್ವನಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಹೇಳಿದರು.
ಇದನ್ನೂ ಓದಿ : ಮುಂಡಗೋಡದಲ್ಲಿ ಇಬ್ಬರು ಟಿಬೆಟಿಯನ್ ವ್ಯಕ್ತಿಗಳ ನಡುವೆ ಮಾರಾಮಾರಿ: ಓರ್ವ ಸಾವು, ಮಾಜಿ ಸೈನಿಕನಿಗೆ ಗಂಭೀರ ಗಾಯ