ಜೈಪುರ (ರಾಜಸ್ಥಾನ): ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ (ಎಸ್‌ಎಂಎ) ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ರಾಜಸ್ಥಾನದ ಬಿಕಾನೆರ್ ಜಿಲ್ಲೆಯ ನೂರ್ ಫಾತಿಮಾ ಎಂಬ ಆರು ತಿಂಗಳ ಕಂದಮ್ಮ ಚಿಕಿತ್ಸೆಗೆ ಬೇಕಿದ್ದ 16 ಕೋಟಿ ರೂ. ಬೆಲೆಯ ಇಂಜೆಕ್ಷನ್ ಸಿಗದೆ ಉಸಿರು ನಿಲ್ಲಿಸಿದೆ. ಕ್ರೌಡ್ ಫಂಡಿಂಗ್ ಮೊರೆ ಹೋದರೂ ಇಷ್ಟೊಂದು ಹಣ ಸಂಗ್ರಹವಾಗಿರಲಿಲ್ಲ.
ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದಾಗ ಮಾಧ್ಯಮದ ಮುಂದೆ ಪ್ರಧಾನಿ ನರೇಂದ್ರ ಮೋದಿಯನ್ನುದ್ದೇಶಿಸಿ ಅಳಲು ತೋಡಿಕೊಂಡಿದ್ದ ಮಗುವಿನ ತಂದೆ ಝೀಶಮ್ ಅಹ್ಮದ್, ತಕ್ಷಣವೇ ಇಂಜೆಕ್ಷನ್ ವ್ಯವಸ್ಥೆಯಾಗಿಲ್ಲವೆಂದರೆ ನನ್ನ ಮಗಳು ಬದುಕುಳಿಯುವುದಿಲ್ಲ, ಅವಳ ಜೀವ ಉಳಿಸಿ ಎಂದು ಮನವಿ ಮಾಡಿಕೊಂಡಿದ್ದರು. ಕ್ರೌಡ್ ಫಂಡಿಂಗ್ ಮೂಲಕ ಸ್ವಲ್ಪ ಹಣ ಸಂಗ್ರಹವಾಗಿದ್ದು, ಅನೇಕ ಸಂಘ-ಸಂಸ್ಥೆಗಳು ಧನ ಸಹಾಯ ಮಾಡಿದ್ದರೂ ಸರಿಯಾದ ಸಮಯಕ್ಕೆ 16 ಕೋಟಿ ರೂ. ಒಗ್ಗೂಡಲಿಲ್ಲ. ಹೀಗಾಗಿ ನೂರ್ ಫಾತಿಮಾ ಇಂದು ಜಗತ್ತಿಗೆ ವಿದಾಯ ಹೇಳಿದ್ದಾಳೆ.
ಇದನ್ನೂ ಓದಿ: ಅಪರೂಪದ ಕಾಯಿಲೆಯೊಂದಿಗೆ ಹೋರಾಡುತ್ತಿರುವ ಮಗುವಿನ ಚಿಕಿತ್ಸೆಗೆ ಹರಿದುಬಂತು 16 ಕೋಟಿ ರೂ.
ದುಬಾರಿ ಚುಚ್ಚುಮದ್ದು
ಎಸ್‌ಎಂಎ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ನೀಡಲು 'ಝೊಲ್ಗೆನ್ಸ್ಮಾ' ಎಂಬ ಅತ್ಯಂತ ದುಬಾರಿ ಚುಚ್ಚುಮದ್ದಿನ ಅವಶ್ಯಕತೆ ಇದ್ದು, ಇದರ ಬೆಲೆ ಬರೋಬ್ಬರಿ 16 ಕೋಟಿ ರೂಪಾಯಿ ಆಗಿದೆ. ಇದು ಭಾರತದಲ್ಲಿ ಲಭ್ಯವಿಲ್ಲದ ಕಾರಣ ಇದನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ 10,000 ಮಕ್ಕಳಲ್ಲಿ ಒಂದು ಮಗು ಈ ಕಾಯಿಲೆಗೆ ತುತ್ತಾಗುತ್ತದೆ. ಪ್ರಸ್ತುತ ಭಾರತದಲ್ಲಿ ಸುಮಾರು 800 ಮಕ್ಕಳು ಎಸ್‌ಎಂಎಯಿಂದ ಬಳಲುತ್ತಿದ್ದಾರೆ. ಸರಿಯಾದ ಚಿಕಿತ್ಸೆ ಸಿಗದಿದ್ದರೆ ಒಂದು ವರ್ಷದಲ್ಲೇ ಮಕ್ಕಳು ಸಾಯುವ ಸಾಧ್ಯತೆಯಿದೆ.
ಮುಂಬೈ, ಹೈದರಾಬಾದ್ ಹೀಗೆ ದೇಶದ ನಾನಾ ಭಾಗದ ಪೋಷಕರು ಕ್ರೌಡ್ ಫಂಡಿಂಗ್ ಮೂಲಕ ಹಣ ಸಂಗ್ರಹಿಸಿ, ಝೊಲ್ಗೆನ್ಸ್ಮಾ ಖರೀದಿಸಿದ ಉದಾಹರಣೆಗಳಿದ್ದು, ಎಸ್‌ಎಂಎ ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ ಮಕ್ಕಳ ಜೀವವನ್ನು ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ: ₹16 ಕೋಟಿ ಬೆಲೆಯ ಚುಚ್ಚುಮದ್ದು ಸ್ವೀಕರಿಸಿತು ಕಂದಮ್ಮ!
ಕ್ರೌಡ್ ಫಂಡಿಂಗ್ ಎನ್ನುವುದು ಜನರ ಸಹಾಯದೊಂದಿಗೆ ಹಣವನ್ನು ಸಂಗ್ರಹಿಸುವ ಹೊಸ ತಂತ್ರವಾಗಿದೆ. ಆನ್‌ಲೈನ್ ಪ್ಲಾಟ್‌ಫಾರ್ಮ್, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಪಂಚದ ಯಾವುದೇ ಭಾಗದಲ್ಲಿ ವಾಸಿಸುವ ಜನರು ಅಗತ್ಯವಿರುವವರಿಗೆ ತಮ್ಮ ಬ್ಯಾಂಕ್ ಅಕೌಂಟ್ ಮೂಲಕ ಹಣವನ್ನು ಕಳುಹಿಸಬಹುದಾಗಿದೆ.