ನವದೆಹಲಿ: ದೇಶದ ಟೆಲಿಕಾಂ ವಲಯದಲ್ಲಿ ಗುರುತರ ಬದಲಾವಣೆಗೆ ಕಾರಣವಾಗಲಿರುವ 5ಜಿ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಾಯವಾಗಿದೆ. ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಹರಾಜು ಪಕ್ರಿಯೆ ಕಳೆದ ಏಳು ದಿನಗಳಿಂದ ನಡೆಯುತ್ತಿತ್ತು. ಮುಕೇಶ್ ಅಂಬಾನಿ ಒಡೆತನದ ಜಿಯೋ 88,078 ಕೋಟಿ ರೂಪಾಯಿ ಮೌಲ್ಯದ ಸ್ಪೆಕ್ಟ್ರಂ ಖರೀದಿಸಿ ಅಗ್ರ ಬಿಡ್ದಾರನಾಗಿ ಹೊರಹೊಮ್ಮಿದೆ.
ಕಳೆದೊಂದು ವಾರದಿಂದ ನಡೆದ ಹರಾಜು ಪ್ರಕ್ರಿಯೆಯಲ್ಲಿ 1.5 ಲಕ್ಷ ಕೋಟಿ ರೂ.ಗೂ ಹೆಚ್ಚು ಮೌಲ್ಯದ 5ಜಿ ಟೆಲಿಕಾಂ ತರಂಗಾಂತರ ಮಾರಾಟವಾಗಿದೆ. ಹೈ ಸ್ಪೀಡ್ ಇಂಟರ್ನೆಟ್‌ಗಾಗಿ ನೀಡಲಾದ ಈ ಸ್ಪೆಕ್ಟ್ರಮ್‌ನ ಹರಾಜು ಮೊತ್ತ ಕಳೆದ ವರ್ಷ ಮಾರಾಟವಾದ 4ಜಿ ಸ್ಪೆಕ್ಟ್ರಮ್ ಹರಾಜು ಮೊತ್ತಕ್ಕಿಂತ ದುಪ್ಪಟ್ಟಾಗಿದೆ. ಜಿಯೋ ನಂತರ ಭಾರ್ತಿ ಏರ್‌ಟೆಲ್ 43,084 ಕೋಟಿ ರೂ, ಹಾಗೂ ವೊಡಾಫೋನ್ ಐಡಿಯಾ ಲಿಮಿಟೆಡ್ 18,784 ಕೋಟಿ ರೂ. ಮೌಲ್ಯದ ತರಂಗಾಂತರ ಖರೀದಿಸಿ ನಂತರದ ಸ್ಥಾನಗಳಲ್ಲಿವೆ. ಹರಾಜು ಪ್ರಕ್ರಿಯೆಯಿಂದ ಕೇಂದ್ರ ಸರ್ಕಾರ ದಾಖಲೆಯ 1.5 ಲಕ್ಷ ಕೋಟಿ ರೂಪಾಯಿಗೂ ಅಧಿಕ ಆದಾಯ ಗಳಿಸಿದೆ.
ಟೆಲಿಕಾಂ ಇಂಡಸ್ಟ್ರಿಗೆ ಹೊಸದಾಗಿ ಪ್ರವೇಶಿಸಿರುವ ಅದಾನಿ ಸಮೂಹವೂ ಸಹ 26Mhz ಸ್ಪೆಕ್ಟ್ರಮ್ ಖರೀದಿಸಿತು. ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಸೇರಿದಂತೆ 4 ಕಂಪನಿಗಳು ತರಂಗಾಂತರ ಖರೀದಿಗೋಸ್ಕರ ಪೈಪೋಟಿ ನಡೆಸಿದ್ದವು.
ಇದನ್ನೂ ಓದಿ: 5G ಸ್ಪೆಕ್ಟ್ರಮ್: ಮೊದಲ ದಿನ 1.45 ಕೋಟಿ ರೂ. ಬಿಡ್ಡಿಂಗ್
ಇಡೀ ಹರಾಜು ಪ್ರಕ್ರಿಯೆ ಒಟ್ಟು 1,50,173 ಕೋಟಿ ರೂ.ಗಳ ಬಿಡ್ ಮೊತ್ತದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, 72,098 MHz ತರಂಗಾಂತರವನ್ನು ಹರಾಜಿಗಿಡಲಾಗಿತ್ತು. ಇದರಲ್ಲಿ 51,236 MHz ಮಾರಾಟವಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಬಿಡ್ ಮಾಡಿದ ಒಟ್ಟು ಸ್ಪೆಕ್ಟ್ರಮ್‌ನ ಸುಮಾರು ಶೇ. 71ರಷ್ಟು ಮಾರಾಟವಾಗಿದೆ. ರಿಲಯನ್ಸ್ ಜಿಯೋ 24,740 MHz, ವೊಡಾಫೋನ್ ಐಡಿಯಾ 1800 MHz, ಭಾರ್ತಿ ಏರ್‌ಟೆಲ್ 19,867 MHz ತರಂಗಾಂತರ ಖರೀದಿಸಿವೆ.