ನವದೆಹಲಿ : 5G ನೆಟ್ವರ್ಕ್ ಅಳವಡಿಕೆ ವೇಗ ಪಡೆದುಕೊಳ್ಳುತ್ತಿದ್ದಂತೆ, ಕಳೆದ ವರ್ಷ ಅಕ್ಟೋಬರ್ 1 ರಂದು 5G ಪ್ರಾರಂಭವಾದಾಗಿನಿಂದ ಭಾರತದಾದ್ಯಂತ ಸರಾಸರಿ ಡೌನ್‌ಲೋಡ್ ವೇಗವು ಶೇಕಡಾ 115 ರಷ್ಟು ಹೆಚ್ಚಾಗಿದೆ ಎಂದು ವರದಿಯೊಂದು ಬುಧವಾರ ತಿಳಿಸಿದೆ. ನೆಟ್‌ವರ್ಕ್ ಇಂಟೆಲಿಜೆನ್ಸ್ ಮತ್ತು ಕನೆಕ್ಟಿವಿಟಿ ಇನ್ಸೈಟ್ಸ್ ಸಮೀಕ್ಷಾ ವೆಬ್ಸೈಟ್ Ookla ಪ್ರಕಾರ, ಸರಾಸರಿ ಡೌನ್‌ಲೋಡ್ ವೇಗವು ಜನವರಿ 2023 ರಲ್ಲಿ 29.85 Mbps ಗೆ ಹೆಚ್ಚಳವಾಗಿದೆ. ಇದು ಸೆಪ್ಟೆಂಬರ್ನಲ್ಲಿ 13.87 Mbps ಆಗಿತ್ತು.
ಇದರ ಪರಿಣಾಮವಾಗಿ, ಸ್ಪೀಡ್‌ಟೆಸ್ಟ್ ಗ್ಲೋಬಲ್ ಇಂಡೆಕ್ಸ್‌ನಲ್ಲಿ ಭಾರತದ ಸ್ಥಾನವು ಸೆಪ್ಟೆಂಬರ್ 2022 ರಲ್ಲಿ 118 ನೇ ಸ್ಥಾನದಿಂದ ಜನವರಿಯಲ್ಲಿ 69 ನೇ ಸ್ಥಾನಕ್ಕೆ ಜಿಗಿದಿದೆ. ಅಂದರೆ ಭಾರತ 49 ಸ್ಥಾನ ಮುನ್ನಡೆ ಸಾಧಿಸಿದೆ. 5G ಸೇವೆಗಳನ್ನು ಪ್ರಾರಂಭಿಸಿದ ನಂತರ ಜಿಯೋ ಮತ್ತು ಏರ್ಟೆಲ್ ಎರಡರಲ್ಲೂ LTE ವೇಗದಲ್ಲಿ ಸುಧಾರಣೆಯಾಗಿದೆ. ಎರಡೂ ಕಂಪನಿಗಳು ತಮ್ಮ ನೆಟ್‌ವರ್ಕ್ ಆಧುನೀಕರಣಕ್ಕೆ ಮಾಡಿದ ಪ್ರಯತ್ನಗಳು ಈಗ ಫಲ ನೀಡುತ್ತಿವೆ.
ಅಕ್ಟೋಬರ್ 2022 ರಲ್ಲಿ ಪ್ರಥಮ ಬಾರಿಗೆ 5G ಅನ್ನು ಪ್ರಾರಂಭಿಸಿದಾಗ, 5G-ಸಾಮರ್ಥ್ಯದ ಸಾಧನಗಳಲ್ಲಿ 5G ನೆಟ್‌ವರ್ಕ್ ಕಾರ್ಯಕ್ಷಮತೆಯಲ್ಲಿ ವ್ಯಾಪಕ ಅಸಮಾನತೆ ಕಂಡುಬಂದಿತ್ತು. 5G ನೆಟ್‌ವರ್ಕ್‌ಗಳು ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಸರಾಸರಿ 5G ಡೌನ್‌ಲೋಡ್ ವೇಗವು 512.57 Mbps (ಗುಜರಾತ್) ಮತ್ತು 19.23 Mbps (ಉತ್ತರ ಪ್ರದೇಶ ಪಶ್ಚಿಮ) ನಡುವೆ ಹೆಚ್ಚು ಕಡಿಮೆ ಆಗುತ್ತಿತ್ತು.
ವಾಸ್ತವವಾಗಿ ಒಂಬತ್ತು ಟೆಲಿಕಾಂ ವಲಯಗಳಾದ ಆಂಧ್ರಪ್ರದೇಶ, ಕೋಲ್ಕತ್ತಾ, ಈಶಾನ್ಯ, ಹರಿಯಾಣ, ರಾಜಸ್ಥಾನ, ಬಿಹಾರ, ಪಂಜಾಬ್, ಕೇರಳ ಮತ್ತು ಉತ್ತರ ಪ್ರದೇಶ ಪಶ್ಚಿಮಗಳಲ್ಲಿ ಸರಾಸರಿ 5G ಡೌನ್‌ಲೋಡ್ ವೇಗವು 100 Mbps ಗಿಂತ ಕಡಿಮೆಯಿತ್ತು. ನೆಟ್‌ವರ್ಕ್‌ಗಳು ಇನ್ನೂ ಪರೀಕ್ಷಾ ಹಂತದಲ್ಲಿರುವುದು ಇದಕ್ಕೆ ಕಾರಣವಾಗಿತ್ತು. ನಾಲ್ಕು ತಿಂಗಳುಗಳ ನಂತರ, ಜನವರಿ 2023 ರಲ್ಲಿ, 5G ಮೀಡಿಯನ್ ಡೌನ್ಲೋಡ್ ವೇಗವು ಎಲ್ಲಾ ಟೆಲಿಕಾಂ ವಲಯಗಳಲ್ಲಿ ಸಾಕಷ್ಟು ಹೆಚ್ಚಾಗಿದೆ. ಈ ವೇಗವು ಜಮ್ಮು ಮತ್ತು ಕಾಶ್ಮೀರವನ್ನು ಹೊರತುಪಡಿಸಿ ಎಲ್ಲೆಡೆ 200 Mbps ಮೀರಿದೆ. ಕೋಲ್ಕತ್ತಾ 500 Mbps ಗಿಂತ ಹೆಚ್ಚಿನ ವೇಗವನ್ನು ಹೊಂದಿದೆ ಎಂದು ವರದಿ ಹೇಳಿದೆ.
ಉದಾಹರಣೆಗೆ ನೋಡುವುದಾದರೆ- ಮೀಡಿಯನ್ 5G ಡೌನ್ಲೋಡ್ ವೇಗವು 4G LTE ಗಿಂತ 25 ಪಟ್ಟು (338.12 Mbps vs. 13.30 Mbps) ಹೆಚ್ಚಾಗಿದೆ. ಹಾಗೆಯೇ ಮೀಡಿಯನ್ 5G ಅಪ್ಲೋಡ್ ವೇಗವು 4G LTE ಗಿಂತ 4.5 ಪಟ್ಟು (19.65 Mbps vs 3.55 Mbps) ಹೆಚ್ಚಾಗಿದೆ. ಭಾರತದಲ್ಲಿ 5G ನೆಟ್ವರ್ಕ್ ಈಗಿನ್ನೂ ಆರಂಭಿಕ ಹಂತದಲ್ಲಿದೆ. ಒಂದೊಮ್ಮೆ ವಾಣಿಜ್ಯಿಕವಾಗಿ ನೆಟ್ವರ್ಕ್ ಸಂಪೂರ್ಣವಾಗಿ ಜಾರಿಯಾದಲ್ಲಿ ಡೌನ್ಲೋಡ್ ಹಾಗೂ ಅಪ್ಲೋಡ್ ವೇಗಗಳು ಕಡಿಮೆಯಾಗಬಹುದು ಎಂಬುದು ಗಮನಾರ್ಹ. ಒಟ್ಟಾರೆಯಾಗಿ ಟೆಲಿಕಾಂ ಕಂಪನಿಗಳು 5G ನೆಟ್ವರ್ಕ್ ಆರಂಭಿಸಲು ಮಾಡಿದ್ದ ಹೂಡಿಕೆ ಹಾಗೂ ಆಧುನಿಕ ತಂತ್ರಜ್ಞಾನದ ಕಾರಣದಿಂದ ಭಾರತದಲ್ಲಿ 5G ನೆಟ್ವರ್ಕ್ ದೇಶದ ಮೂಲೆ ಮೂಲೆಗೂ ತಲುಪುವ ದಿನಗಳು ದೂರವಿಲ್ಲ ಎನ್ನಲಾಗಿದೆ.
ಇದನ್ನೂ ಓದಿ : ದೇಶದ ಮೆಟ್ರೋ ಇತಿಹಾಸದಲ್ಲಿ ಹೊಸ ಮೈಲಿಗಲ್ಲು.. ಎಂ. ಜಿ ರಸ್ತೆಯ ನಿಲ್ದಾಣದಲ್ಲಿ 5ಜಿ ನೆಟ್ವರ್ಕ್ ಪ್ರಾಯೋಗಿಕ ಪರೀಕ್ಷೆ ಯಶಸ್ವಿ