ನವದೆಹಲಿ : ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಭಾನುವಾರ 524 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಕಳೆದ 113 ದಿನಗಳಲ್ಲಿ ದಾಖಲಾದ ಅತ್ಯಧಿಕ ಕೋವಿಡ್ ಪ್ರಕರಣಗಳ ಸಂಖ್ಯೆ ಇದಾಗಿದೆ. ದೇಶದಲ್ಲಿ ಕೋವಿಡ್-19 ಮತ್ತೆ ಹರಡದಂತೆ ತಡೆಗಟ್ಟಲು ಐದಂಶಗಳ ಕಾರ್ಯಸೂಚಿಯನ್ನು ಅಳವಡಿಸಿಕೊಳ್ಳುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯವು ಸೂಚಿಸಿದ ಒಂದು ದಿನದ ನಂತರ ಅತ್ಯಧಿಕ ಕೋವಿಡ್-19 ಪ್ರಕರಣಗಳು ವರದಿಯಾಗಿರುವುದು ಗಮನಾರ್ಹ.
ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 3,618 ಕ್ಕೆ ಏರಿದೆ. ಇದು ಒಟ್ಟು ಪ್ರಕರಣಗಳಲ್ಲಿ 0.01 ಪ್ರತಿಶತವಾಗಿದೆ. ಕಳೆದ ದಿನದಲ್ಲಿ ಒಟ್ಟು 96,170 ಕೋವಿಡ್ ಪರೀಕ್ಷೆಗಳನ್ನು ಆರೋಗ್ಯ ಇಲಾಖೆ ನಡೆಸಿದೆ. ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 5,30,781 ಆಗಿದೆ. ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡ ಒಟ್ಟು ಜನರ ಸಂಖ್ಯೆ 4,41,56,093 ಕ್ಕೆ ಏರಿದೆ. ಏತನ್ಮಧ್ಯೆ, ಕೇಂದ್ರ ಆರೋಗ್ಯ ಸಚಿವಾಲಯವು ಶನಿವಾರ ರಾಜ್ಯಗಳಿಗೆ ಪತ್ರ ಬರೆದಿದ್ದು, ಕೆಲ ರಾಜ್ಯಗಳಲ್ಲಿ ಕೋವಿಡ್ -19 ಪಾಸಿಟಿವಿಟಿ ಹೆಚ್ಚಾಗುತ್ತಿರುವುದನ್ನು ಎತ್ತಿ ತೋರಿಸಿದೆ. ಪಾಸಿಟಿವಿಟಿ ಹೆಚ್ಚಳದ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವ ಅಗತ್ಯವನ್ನು ಪತ್ರದಲ್ಲಿ ಒತ್ತಿ ಹೇಳಲಾಗಿದೆ.
ಕಳೆದ ಕೆಲವು ತಿಂಗಳುಗಳಲ್ಲಿ ಕೋವಿಡ್ -19 ಸೋಂಕು ಹರಡುವಿಕೆ ಗಣನೀಯವಾಗಿ ಕಡಿಮೆಯಾಗಿದೆ. ಆದಾಗ್ಯೂ ಕೆಲ ರಾಜ್ಯಗಳಲ್ಲಿ ಕೋವಿಡ್ -19 ಪಾಸಿಟಿವಿಟಿ ದರದಲ್ಲಿ ಕ್ರಮೇಣ ಏರಿಕೆಯಾಗುತ್ತಿರುವುದು ಕಳವಳದ ವಿಷಯವಾಗಿದೆ. ಒಟ್ಟಾರೆ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದರೂ ಕೋವಿಡ್-19 ಬಗ್ಗೆ ನಾವು ಈಗಲೂ ಜಾಗರೂಕರಾಗಿರಬೇಕಿದೆ. ಟೆಸ್ಟ್-ಟ್ರ್ಯಾಕ್-ಟ್ರೀಟ್ ಮತ್ತು ವ್ಯಾಕ್ಸಿನೇಶನ್, ಕೋವಿಡ್ ಸೂಕ್ತ ನಡವಳಿಕೆ ಹೀಗೆ ಈ ಐದು ಅಂಶಗಳನ್ನು ಆಧರಿಸಿ ಕೆಲಸ ಮಾಡುವ ಅಗತ್ಯವಿದೆ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
H3N2 ಮಾರಣಾಂತಿಕವಲ್ಲ, ಗಾಬರಿ ಬೇಡ: H3N2 ಇನ್ಫ್ಲುಯೆಂಜಾ ಸಾಂಕ್ರಾಮಿಕದ ಹರಡುವಿಕೆ ಸಾಮಾನ್ಯ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. H3N2 ಪ್ರಕರಣಗಳು ಹೆಚ್ಚಾಗುತ್ತಿರುವುದು ಹಾಗೂ ಇದರಿಂದ ಇಬ್ಬರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ತಜ್ಞರು ಸ್ಪಷ್ಟನೆ ನೀಡಿದ್ದಾರೆ. ಕೋವಿಡ್-19 ಕಾರಣದಿಂದ ಕಳೆದ ಎರಡು ವರ್ಷ ಲಾಕ್ಡೌನ್ ವಿಧಿಸಿದ್ದರಿಂದ ಮಕ್ಕಳಲ್ಲಿ H3N2 ಇನ್ಫ್ಲುಯೆಂಜಾ ಕಾಣಿಸಿಕೊಂಡಿರಲಿಲ್ಲ. ಸಾಮಾನ್ಯ ಪರಿಸ್ಥಿತಿಗಳಲ್ಲಿ ಈ ವೈರಸ್ ಮಾರಣಾಂತಿಕವಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮಾರ್ಚ್ 9 ರವರೆಗೆ ದೇಶದಲ್ಲಿ H3N2 ಸೇರಿದಂತೆ ವಿವಿಧ ಇನ್ಫ್ಲುಯೆಂಜಾ ಕಾರಣಗಳಿಂದ ಒಟ್ಟು 3,038 ಪ್ರಯೋಗಾಲಯ ದೃಢಪಡಿಸಿದ ಪ್ರಕರಣಗಳು ದಾಖಲಾಗಿವೆ. ಕರ್ನಾಟಕ ಮತ್ತು ಹರಿಯಾಣದಲ್ಲಿ ತಲಾ ಒಂದು ಸಾವು ಸಂಭವಿಸಿವೆ.
H3N2 ಇದು ಮೂಲತಃ ಮಾನವರಿಂದ ಹರಡದ ಇನ್ಫ್ಲುಯೆಂಜಾ ವೈರಸ್ ಆಗಿದ್ದು, ಇದು ಸಾಮಾನ್ಯವಾಗಿ ಹಂದಿಗಳಲ್ಲಿ ಹರಡುತ್ತದೆ ಮತ್ತು ಮನುಷ್ಯರಿಗೆ ಸೋಂಕು ತಗುಲುತ್ತದೆ. ಆದರೆ ಭಾರತದಲ್ಲಿ ಸಾಮಾನ್ಯವಾಗಿ ಜನವರಿ ಯಿಂದ ಮಾರ್ಚ್ ಮತ್ತು ನಂತರ ಮಾನ್ಸೂನ್ ನಂತರ ಕಂಡುಬರುವ ಋತುಮಾನ ಆಧರಿತ ಈ ಜ್ವರವು ಮಾರ್ಚ್ ನಂತರ ಕ್ಷೀಣಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ. ಸೋಂಕನ್ನು ತಪ್ಪಿಸಲು ಕೋವಿಡ್ ಪ್ರೋಟೋಕಾಲ್‌ಗಳು ಮತ್ತು ಸ್ವಚ್ಛತೆಯ ಅಭ್ಯಾಸಗಳನ್ನು ಅನುಸರಿಸುವಂತೆ ಸರ್ಕಾರ ಶಿಫಾರಸು ಮಾಡಿದೆ.
ಇದನ್ನೂ ಓದಿ : ಒಮಿಕ್ರಾನ್ ಸೋಂಕಿನ ಬಳಿಕ ದೀರ್ಘ ಕೋವಿಡ್ ಸಾಧ್ಯತೆ ಕಡಿಮೆ