ಡೆಹರಾಡೂನ್( ಉತ್ತರಾಖಂಡ): ದೇವಭೂಮಿ ಎಂದೇ ಪ್ರಸಿದ್ಧಿ ಪಡೆದಿರುವ ವಿಶ್ವವಿಖ್ಯಾತ ಉತ್ತರಾಖಂಡದ ಪುಣ್ಯ ಕ್ಷೇತ್ರಗಳಾದ ಚಾರ್ ಧಾಮ್ನಲ್ಲಿ ಅಪಾರ ಸಂಖ್ಯೆಯ ಭಕ್ತ ಸಮೂಹ ಕಂಡು ಬರುತ್ತಿದೆ. ಈ ಬಾರಿಯ ಚಾರ್ ಧಾಮ್ ಯಾತ್ರೆಯಲ್ಲಿ ಭಕ್ತರು ಈ ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿದಿದ್ದಾರೆ. ಹೌದು 2023ರ ಪವಿತ್ರ ಯಾತ್ರೆಯಲ್ಲಿ ಭಕ್ತರ ಸಂಖ್ಯೆ 50 ಲಕ್ಷವನ್ನು ದಾಟಿ ಮುನ್ನುಗ್ಗುತ್ತಿದೆ. ಈ ಮೂಲಕ ಹೊಸ ದಾಖಲೆ ಇತಿಹಾಸದ ಪುಟ ಸೇರಿದೆ. ಈ ಬಾರಿಯ ಚಾರ್ ಧಾಮ್ ಯಾತ್ರೆಯನ್ನು ಏಪ್ರಿಲ್ 22 ರಂದು ಆರಂಭಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಂಡು ತೆರಳುತ್ತಿದ್ದಾರೆ.
ಒಟ್ಟು 71 ಲಕ್ಷ ಭಕ್ತರು ಯಾತ್ರೆಗೆ ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ 50 ಲಕ್ಷ ಭಕ್ತರು ಚಾರ್ ಧಾಮ್ಕ್ಕೆ ಭೇಟಿ ನೀಡಿದ್ದಾರೆ. ಆದರೆ, ಯಾತ್ರೆ ಮುಗಿಯಲು ಇನ್ನೂ 1 ತಿಂಗಳು ಬಾಕಿ ಇದೆ. ಅದಾಗಲೇ ಭಕ್ತರ ಸಂಖ್ಯೆ 50 ಲಕ್ಷ ದಾಟಿದೆ. ಈ ಬಾರಿ ಸರ್ಕಾರ ಯಾತ್ರಾ ಪ್ರಯಾಣಕ್ಕೆ ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸಿತ್ತು. ಆದರೆ ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ಸರ್ಕಾರ ನೋಂದಣಿಯನ್ನೇ ಸ್ಥಗಿತಗೊಳಿಸಬೇಕಾಯಿತು. ಇನ್ನು ಅಂದಾಜಿನ ಪ್ರಕಾರ 2030 ರ ಹೊತ್ತಿಗೆ ಚಾರ್ ಧಾಮಗಳಾದ ಕೇದಾರನಾಥ, ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿಗೆ 1 ಕೋಟಿ ಯಾತ್ರಿಕರು ಭೇಟಿ ನೀಡಬಹುದು ಎಂದು ಲೆಕ್ಕಾಚಾರ ಮಾಡಲಾಗಿದೆ. ಹೀಗಾಗಿ ಕೇದಾರನಾಥ ಪುನರ್ ನಿರ್ಮಾಣದತ್ತ ಹೆಚ್ಚಿನ ಗಮನ ಹರಿಸಲಾಗುತ್ತಿದೆ.
ಇಲ್ಲಿವರೆಗೆ ಚಾರ್ಧಾಮ್ಗೆ ಭೇಟಿ ನೀಡಿದ ಭಕ್ತರ ವಿವರ:
1. ಕೇದಾರನಾಥ- 17,08,868 ಭಕ್ತರು.
2. ಬದರಿನಾಥ-15,84,790 ಭಕ್ತರು.
3. ಗಂಗೋತ್ರಿ-846,471 ಭಕ್ತರು.
4. ಯಮುನೋತ್ರಿ- 6,94,830 ಭಕ್ತರು.
2022ರಲ್ಲಿ 46 ಲಕ್ಷ ಭಕ್ತರ ಭೇಟಿ: ಕಳೆದ ವರ್ಷ 46,81,131 ಯಾತ್ರಿಗಳು ಚಾರ್ಧಾಮ್ಗೆ ಭೇಟಿ ನೀಡಿದ್ದರು. ಅದಕ್ಕೂ ಹಿಂದೆ 2019 ರಲ್ಲಿ 32,40,882 ಭಕ್ತರು ಚಾರ್ಧಾಮ್ಗೆ ಭೇಟಿ ನೀಡಿದ್ದರು. ಚಾರ್ ಧಾಮ್ ಯಾತ್ರೆಯನ್ನು ಅತ್ಯಂತ ಪವಿತ್ರ ಎಂದೇ ಪರಿಗಣಿಸಲಾಗಿದೆ ಮತ್ತು ಹಿಂದೂಗಳು ಈ ಎಲ್ಲ ನಾಲ್ಕು ಧಾಮಗಳಿಗೆ ಭೇಟಿ ನೀಡುವುದು ಬಹಳ ಮುಖ್ಯ ಎಂದು ನಂಬಲಾಗಿದೆ. ಈ ಚಾರ್‌ಧಾಮಗಳಿಗೆ ಭೇಟಿ ನೀಡುವುದರಿಂದ ಭಕ್ತರ ಎಲ್ಲ ಪಾಪಗಳು ತೊಳೆದುಹೋಗುತ್ತವೆ ಮತ್ತು ಆತ್ಮವು ಈ ಜೀವನ ಮತ್ತು ಮರಣದ ಬಂಧನದಿಂದ ಮುಕ್ತಿ ಪಡೆಯುತ್ತದೆ ಎಂದು ನಂಬಲಾಗಿದೆ.
ಹೀಗಾಗಿ ಪ್ರತಿಯೊಬ್ಬ ಹಿಂದೂ ಜೀವನದಲ್ಲಿ ಒಮ್ಮೆ ಚಾರ್ಧಾಮ್ ಯಾತ್ರೆ ಕೈಗೊಳ್ಳಬೇಕು ಎಂಬ ಆಶಯ ಹೊಂದಿರುತ್ತಾರೆ.
ಇದನ್ನೂ ಓದಿ: ಚಾರ್ಧಾಮ್ ಯಾತ್ರೆ: 46 ಲಕ್ಷ ಯಾತ್ರಾರ್ಥಿಗಳ ಭೇಟಿ, ಹೊಸ ದಾಖಲೆ