ಹರಿದ್ವಾರ (ಉತ್ತರಾಖಂಡ): ಮದುವೆ ಮೆರವಣಿಗೆಗೆ ಆಹ್ವಾನಿಸದ ಕಾರಣ ಚಂದ್ರಶೇಖರ್ ಎಂಬ ವ್ಯಕ್ತಿ ತನ್ನ ಆತ್ಮೀಯ ಸ್ನೇಹಿತನಾದ ರವಿ ವಿರುದ್ಧ 50 ಲಕ್ಷ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾನೆ. ಚಂದ್ರಶೇಖರ್ ಎಂಬುವವರು ರವಿಯ ಮದುವೆಗಾಗಿ ಬಹಳ ದಿನಗಳಿಂದ ಕಾಯುತ್ತಿದ್ದರು. ಮದುವೆ ಕಾರ್ಡ್‌ಗಳನ್ನೂ ವಿತರಿಸಿದ್ದರು. ಆದರೆ ಮದುವೆ ದಿನ, ವರ ತನ್ನ ಸ್ನೇಹಿತನನ್ನು ಬಿಟ್ಟು ಸಮಯಕ್ಕಿಂತ ಮುಂಚಿತವಾಗಿ ಮದುವೆ ಮೆರವಣಿಗೆಗೆ ಹೋಗಿದ್ದಾನೆ.
ಹರಿದ್ವಾರದ ಬಹದರಾಬಾದ್‌ನ ಆರಾಧ್ಯ ಕಾಲೋನಿ ನಿವಾಸಿ ರವಿ ವಿವಾಹವು 23 ಜೂನ್ 2022 ರಂದು ಬಿಜ್ನೋರ್ ಜಿಲ್ಲೆಯ ಧಾಂಪುರದ ಹುಡುಗಿಯೊಂದಿಗೆ ನಿಶ್ಚಯವಾಗಿತ್ತು. ಮದುವೆ ಕಾರ್ಡ್‌ಗಳನ್ನು ವಿತರಿಸಲು ರವಿ ಸ್ನೇಹಿತನಾದ ಚಂದ್ರಶೇಖರ್‌ಗೆ ಪಟ್ಟಿ ನೀಡಿದ್ದ.
ರವಿ ಕೋರಿಕೆಯ ಮೇರೆಗೆ ಚಂದ್ರಶೇಖರ್ ಎಲ್ಲರಿಗೂ ಆಮಂತ್ರಣ ಪತ್ರ ವಿತರಿಸಿದ್ದರು. ಜೂನ್ 23 ರಂದು ರವಿ ಅವರ ಮದುವೆ ಮೆರವಣಿಗೆ ನಿಗದಿಯಾಗಿತ್ತು. ಇವರೆಲ್ಲ ಸಂಜೆ 4.50ಕ್ಕೆ ಚಂದ್ರಶೇಖರ್ ಜೊತೆ ಬಂದಾಗ ಅದಾಗಲೇ ಮದುವೆ ಮೆರವಣಿಗೆ ಹೊರಟಿದ್ದಾರೆ. ರವಿಗೆ ಕರೆ ಮಾಡಿದಾಗ, ನಾವು ಹೋಗಿದ್ದೇವೆ ಎಂದು ಚಂದ್ರಶೇಖರ್‌ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಆಗಸದಲ್ಲೇ ಭಾರತೀಯ ಯುದ್ಧ ವಿಮಾನಗಳಿಗೆ ಇಂಧನ ಪೂರೈಸಿದ ಯುಎಇ ವಾಯುಪಡೆ
ಇದಾದ ಮೇಲೆ ಚಂದ್ರಶೇಖರ್ ಜೊತೆ ಬಂದವರೆಲ್ಲ ಈ ವಿಷಯವಾಗಿ ಕೋಪಗೊಂಡಿದ್ದಾರೆ. ಅಲ್ಲದೇ ಚಂದ್ರಶೇಖರ್‌ಗೆ ಹೀನಾಮಾನವಾಗಿ ಬೈಯ್ದಿದ್ದಾರಂತೆ. ಈ ವಿಷಯವನ್ನು ಚಂದ್ರಶೇಖರ್ ರವಿ ಅವರಿಗೆ ದೂರವಾಣಿ ಮೂಲಕ ಸಹ ತಿಳಿಸಿದ್ದಾರಂತೆ. ಆದರೆ ಅವರು ಯಾವುದೇ ರೀತಿಯ ವಿಷಾದ ವ್ಯಕ್ತಪಡಿಸಲಿಲ್ಲ, ಕ್ಷಮೆಯೂ ಕೇಳಲಿಲ್ಲ. ಈ ಹಿನ್ನೆಲೆಯಲ್ಲಿ ಚಂದ್ರಶೇಖರ್ ತಮ್ಮ ವಕೀಲ ಅರುಣ್ ಬದೌರಿಯಾ ಮೂಲಕ ರವಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. 3 ದಿನಗಳಲ್ಲಿ ಮಾನ ನಷ್ಟಕ್ಕಾಗಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಮತ್ತು ಚಂದ್ರಶೇಖರ್ ಅವರಿಗೆ 50 ಲಕ್ಷ ರೂ. ಪರಿಹಾರ ನೀಡಬೇಕು. ಇಲ್ಲವೇ ಸಕ್ಷಮ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ!.