ವಿರುದುನಗರ (ತಮಿಳುನಾಡು): ಪಟಾಕಿ ತಯಾರಿಕೆಗೆ ಹೆಸರುವಾಸಿಯಾದ ತಮಿಳುನಾಡಿನ ಶಿವಕಾಶಿ ಈ ಬಾರಿ ಭಾರಿ ವ್ಯವಹಾರ ನಷ್ಟ ಅನುಭವಿಸಿದೆ ಎಂದು ವರದಿಯಾಗಿದೆ. ಬೆಳಕಿನ ಹಬ್ಬ ದೀಪಾವಳಿಗೆ 6 ಸಾವಿರ ಕೋಟಿಯಷ್ಟು ಪಟಾಕಿ ಮಾರಾಟವಾಗಿದ್ದರೂ, ಇದು ಕಳೆದ ಬಾರಿಗಿಂತ ಅರ್ಧಕ್ಕಿಂತಲೂ ಕಡಿಮೆಯಾಗಿದೆ.
ತಮಿಳುನಾಡಿನ ವಿರುದುನಗರ ಜಿಲ್ಲೆಯ ಶಿವಕಾಶಿ ಇಡೀ ದೇಶಕ್ಕೆ ಪಟಾಕಿ ಸರಬರಾಜು ಮಾಡುವ ಮುಖ್ಯ ಕೇಂದ್ರವಾಗಿದೆ. ಇಲ್ಲಿನ ಪಟಾಕಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಹೀಗಾಗಿ ಪ್ರಮುಖ ವ್ಯವಹಾರ ಕೇಂದ್ರವೂ ಆಗಿರುವ ಶಿವಕಾಶಿ ಈ ಬಾರಿಯ ಕಟ್ಟುನಿಟ್ಟಿನ ನಿಯಮಗಳು ಮತ್ತು ಅನಾಹುತಗಳಿಂದಾಗಿ ಭಾರೀ ನಷ್ಟಕ್ಕೀಡಾಗಿದೆ.
ದೇಶಾದ್ಯಂತ 6 ಸಾವಿರ ಕೋಟಿ ರೂಪಾಯಿ ಮೌಲ್ಯದ ಪಟಾಕಿಗಳು ಮಾರಾಟವಾಗಿವೆ ಎಂದು ಪಟಾಕಿ ತಯಾರಕರು ತಿಳಿಸಿದ್ದಾರೆ. 2022 ಕ್ಕೆ ಹೋಲಿಸಿದರೆ ಈ ವರ್ಷ ವ್ಯವಹಾರವು 50 ಕೋಟಿ ರೂಪಾಯಿಗಳಷ್ಟು ಕುಸಿತ ಕಂಡಿದೆ. ಜೊತೆಗೆ ಪಟಾಕಿ ತಯಾರಿಕೆಯಲ್ಲೂ ಶೇಕಡಾ 10 ರಷ್ಟು ಇಳಿಕೆ ಕಂಡಿದೆ. ನಿರಂತರ ಮಳೆ, ಪಟಾಕಿ ಕೇಂದ್ರಗಳಲ್ಲಾದ ಅವಘಡಗಳು, ಜೀವಹಾನಿಯಿಂದಾಗಿ ಉತ್ಪಾದನೆ ಮೇಲೆ ಪೆಟ್ಟು ಬಿದ್ದಿದೆ ಎಂದು ತಿಳಿಸಿದರು.
ಸರ್ಕಾರಗಳು ಪಟಾಕಿ ಉತ್ಪಾದನೆ ಮೇಲೆ ಹೇರಿದ ಕಟ್ಟುನಿಟ್ಟಿನ ನಿಯಮಗಳು ಕೂಡ 'ಶಿವಕಾಶಿ' ಮೇಲೆ ಪರಿಣಾಮ ಬೀರಿವೆ. ಆದಾಗ್ಯೂ ದೀಪಾವಳಿ ಹಬ್ಬಕ್ಕೆ 6 ಸಾವಿರ ಕೋಟಿ ರೂಪಾಯಿ ಮೌಲ್ಯದಷ್ಟು ಪಟಾಕಿಗಳನ್ನು ದೇಶದ ಉದ್ದಗಲಕ್ಕೂ ಸರಬರಾಜು ಮಾಡಲಾಗಿದೆ ಎಂದು ತಿಳಿಸಿದರು.
50 ಕೋಟಿ ರೂಪಾಯಿ ನಷ್ಟ: ತಮಿಳುನಾಡಿನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ತಯಾರಿಕೆಗೆ ಪರವಾನಗಿ ನೀಡಲು ಸರ್ಕಾರ ವಿಳಂಬ ಮಾಡಿತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯದಲ್ಲಿ ಪಟಾಕಿ ಮಾರಾಟದಲ್ಲಿ 50 ಕೋಟಿ ರೂ.ನಷ್ಟು ನಷ್ಟವಾಗಿದೆ. ಆದಾಗ್ಯೂ, ದೇಶಾದ್ಯಂತ ಮಾರಾಟಕ್ಕೆ ಕಳುಹಿಸಲಾದ ಪಟಾಕಿಗಳಲ್ಲಿ ಶೇಕಡಾ 95 ರಷ್ಟು ಮಾರಾಟ ಕಂಡಿದೆ ಎಂದು ವರದಿಯಾಗಿದೆ.
ಈ ಬಾರಿ ದೇಶಾದ್ಯಂತ ದೀಪಾವಳಿ ಹಬ್ಬಕ್ಕೆ ಕಳುಹಿಸಿದ ಪಟಾಕಿಗಳ ಮಾರಾಟ ಹಾಗೂ ಬಂದ ಮೊತ್ತವನ್ನು ಮುಂದಿನ ದಿನಗಳಲ್ಲಿ ಪರಿಸ್ಥಿತಿಗಳಿಗೆ ಅನುಗುಣವಾಗಿ ಪಟಾಕಿ ಉತ್ಪಾದನೆ ಮಾಡುವುದಾಗಿ ಅಲ್ಲಿ ವ್ಯಾಪಾರಿಯೊಬ್ಬರು ತಿಳಿಸಿದರು.
ಸುಪ್ರೀಂಕೋರ್ಟ್ ಖಡಕ್ ಎಚ್ಚರಿಕೆ: ದೇಶದಲ್ಲಿ ವಾಯುಮಾಲಿನ್ಯ ತೀವ್ರವಾಗಿರುವ ಹಿನ್ನೆಲೆಯಲ್ಲಿ ಪಟಾಕಿ ಬಳಕೆಯನ್ನು ನಿಯಂತ್ರಿಸಬೇಕು ಎಂದು ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳಿಗೆ ಖಡಕ್ ಎಚ್ಚರಿಕೆ ನೀಡಿತ್ತು. ಅಲ್ಲದೇ, ಜನರು ಕೂಡ ತಮ್ಮ ಹೊಣೆಗಾರಿಕೆ ಪಾಲಿಸಬೇಕು. ವಾಯುಮಾಲಿನ್ಯ ತಡೆಗೆ ಪ್ರತಿಯೊಬ್ಬರೂ ಪಾಲುದಾರರಾಗಬೇಕು ಎಂದು ಸೂಚಿಸಿತ್ತು. ಹೀಗಾಗಿ ಪಟಾಕಿ ತಯಾರಿಕೆಗೆ ಹಲವು ರಾಜ್ಯಗಳಲ್ಲಿ ಹಿನ್ನಡೆ ಉಂಟಾಗಿದೆ.
ಇದನ್ನೂ ಓದಿ: ಗ್ಯಾರೇಜ್ನಲ್ಲಿ ಭೀಕರ ಅಗ್ನಿ ಅವಘಡ: ನಾಲ್ಕುದಿನದ ಮಗು, ಮಹಿಳೆ ಸೇರಿ 9 ಜನ ಸಜೀವದಹನ