ಮುಂಬೈ: ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಆರೋಪದಲ್ಲಿ ಜೈಲು ಸೇರಿರುವ ಬಾಲಿವುಡ್ ನಟ ಶಾರುಕ್ ಖಾನ್ ಪುತ್ರ ಆರ್ಯನ್ ಬಿಡುಗಡೆಗೆ 25 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎನ್‌ಸಿಬಿ, ತನಿಖೆಗಾಗಿ ಐವರು ಸದಸ್ಯರ ತಂಡ ರಚಿಸಿದೆ.
ಎನ್‌ಸಿಬಿಯ ವಿಚಕ್ಷಣ ವಿಭಾಗದ ಐವರು ಸದಸ್ಯರ ಟೀಂ ಮುಂಬೈಗೆ ತೆರಳಿ ಪ್ರಭಾರ ವಲಯ ಅಧಿಕಾರಿ ಸಮೀರ್ ವಾಂಖೆಡೆ ಅವರ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ತನಿಖೆ ನಡೆಸಲಿದೆ.
ಕ್ರೂಸ್ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ ಮೇಲೆ ದಾಳಿ ಮಾಡಿದ್ದ ಸಮೀರ್ ವಾಂಖೆಡೆ ನೇತೃತ್ವದ ತಂಡ ಬಾಲಿವುಡ್ ನಟ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಹಲವರನ್ನು ಬಂಧಿಸಿದ್ದರು. ಆ ಬಳಿಕ ಆರ್ಯನ್ ಖಾನ್ ಬಿಡುಗಡೆಗೆ 25 ಕೋಟಿ ರೂಪಾಯಿಗೆ ಬೇಡಿಕೆ ಇಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಪ್ರಕರಣದಲ್ಲಿ ಸಾಕ್ಷಿ ಎಂದು ಹೆಸರಿಸಲಾದ ವ್ಯಕ್ತಿಯೊಬ್ಬರು ಅಧಿಕಾರಿ ವಿರುದ್ಧ ಮಾಡಿದ ಲಂಚದ ಆರೋಪದ ಬಗ್ಗೆ ಎನ್‌ಸಿಬಿ ತನಿಖೆಗೆ ಆದೇಶಿಸಿತ್ತು.
ಸಮೀರ್ ವಾಂಖೆಡೆ ವಿರುದ್ಧ ಸುಲಿಗೆಯಿಂದ ಹಿಡಿದು ಅಕ್ರಮ ಫೋನ್ ಕದ್ದಾಲಿಕೆ, ನಕಲಿ ದಾಖಲೆಗಳ ಮೂಲಕ ಪರಿಶಿಷ್ಟ ಜಾತಿಯ ಕೋಟಾ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಸರಣಿ ಆರೋಪಗಳನ್ನು ಮಾಡಿದ್ದಾರೆ.
'ನವಾಬ್ ಮಲಿಕ್ ರಾವಣನಂತಿದ್ದಾನೆ':
ಇದೇ ವಿಚಾರ ಸಂಬಂಧ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರ ತಂದೆ ಜ್ಞಾನದೇವ್ ವಾಂಖೆಡೆ ಪ್ರತಿಕ್ರಿಯಿಸಿದ್ದು, ಈ ಪ್ರಕರಣದ ಬಳಿಕ ನಾವು ಜೀವ ಬೆದರಿಕೆಗಳನ್ನು ಎದುರಿಸುತ್ತಿದ್ದೇವೆ. ನವಾಬ್ ಮಲಿಕ್ ಪ್ರಭಾವಿ ವ್ಯಕ್ತಿಯಾಗಿದ್ದು, ರಾವಣನಂತಿದ್ದಾನೆ. 10 ಕೈ, 10 ಬಾಯಿ, ಹಣ ಇರುವ ಅವರು ಏನು ಬೇಕಾದರೂ ಮಾಡಬಹುದು. ನಾನು ದಲಿತ, ನನ್ನ ಮಗ ಹೇಗೆ ಮುಸ್ಲಿಂ ಆಗುತ್ತಾನೆ? ನನ್ನ ಪತ್ನಿ ಮುಸ್ಲಿಂ ಎಂದು ಹೇಳಿದ್ದಾರೆ.
ನಮ್ಮ ವೈಯಕ್ತಿಕ ಜೀವನದ ಮೇಲೆ ಆಕ್ರಮಣ ಮಾಡಲಾಗಿದೆ. ನವಾಬ್ ಮಲಿಕ್ ನಮ್ಮನ್ನು ಗುರಿಯಾಗಿಸಿಕೊಂಡರೆ ಮಾನನಷ್ಟ ಮೊಕದ್ದಮೆ ಹೂಡುವ ಮೂಲಕ ನ್ಯಾಯಾಲಯದ ಮೊರೆ ಹೋಗುತ್ತೇವೆ. ಆತನ ಅಳಿಯ ಡ್ರಗ್ಸ್ ಪ್ರಕರಣದಲ್ಲಿ ಬಂಧನವಾಗಿರುವುದರಿಂದ ನಮ್ಮನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.