ಹತ್ರಾಸ್(ಉತ್ತರ ಪ್ರದೇಶ): ಟ್ರ್ಯಾಕ್ಟರ್ ಟ್ರಾಲಿ ಮತ್ತು ಡಂಪರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಟ್ರ್ಯಾಕ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಐವರು ಸಾವನ್ನಪ್ಪಿದ್ದಾರೆ. ಸಹಾಪೌ ಕೊಟ್ವಾಲಿ ಪ್ರದೇಶದ ಸದಾಬಾದ್ ರಸ್ತೆಯಲ್ಲಿ ಶುಕ್ರವಾರ ರಾತ್ರಿ 12 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದೆ.
ಮೃತರನ್ನು ಕಾಸ್ಗಂಜ್‌ನ ಅಮಾಪುರದ ವಿಕ್ರಮ್, ಜಲೇಸರ್‌ನ ಗಧಿಯಾ ಸಕ್ರೌಲಿಯ ಮಾಧುರಿ(22), ವಜೀರ್‌ಪುರ ಕೋಟ್ಲಾ ಫಿರೋಜಾಬಾದ್‌ನ ಹೇಮಲತಾ(12), ಗಧಿಯಾ ಸಕ್ರೌಲಿಯ ಲಕ್ಷ್ಮಿ(18) ಮತ್ತು ಅಭಿಷೇಕ್(20) ಎಂದು ಗುರುತಿಸಲಾಗಿದೆ. ಅವಘಡದಲ್ಲಿ ಸುಮಾರು 16 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 6 ಮಂದಿಯನ್ನು ಆಗ್ರಾ ವೈದ್ಯಕೀಯ ಕಾಲೇಜಿಗೆ ಮತ್ತು ಒಬ್ಬರನ್ನು ಅಲಿಗಢ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಇಟಾಹ್ ಜಿಲ್ಲೆಯ ಜಲೇಸರ್‌ನಿಂದ ಸುಮಾರು 50ರಿಂದ 60 ಮಂದಿ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಗೋವರ್ಧನ್ ಪರಿಕ್ರಮಕ್ಕೆ ತೆರಳಿದ್ದರು. ಇವರಲ್ಲಿ ಒಂದೇ ಕುಟುಂಬದವರು ಇದ್ದರು. ಟ್ರ್ಯಾಕ್ಟರ್ ಸಹಾಪೌ ಕೊಟ್ವಾಲಿ ಪ್ರದೇಶದ ಸದಾಬಾದ್ ರಸ್ತೆಯಲ್ಲಿದ್ದಾಗ, ಮುಂಭಾಗದಿಂದ ಬರುತ್ತಿದ್ದ ಡಂಪರ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಮಥುರಾ ಜಿಲ್ಲೆಯಲ್ಲಿ ಸುಮಾರು 50 ರಿಂದ 60 ಜನರು ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಗೋವರ್ಧನ ಪರಿಕ್ರಮ ಮಾಡಲು ಹೋಗುತ್ತಿದ್ದರು. ಸಹಾಪೌ ಪ್ರದೇಶದಲ್ಲಿ ಡಂಪರ್‌ಗೆ ಡಿಕ್ಕಿ ಹೊಡೆದು ಈ ಭೀಕರ ಸಾವು ನೋವು ಸಂಭವಿಸಿದೆ. ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 5ಕ್ಕೆ ಏರಿದೆ. 13 ಗಾಯಾಳುಗಳಿಗೆ ಸದಾಬಾದ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಹಪೌ ಪೊಲೀಸ್ ಠಾಣೆಯ ಉಸ್ತುವಾರಿ ಅಮಿತ್ ಕುಮಾರ್ ಮಾಹಿತಿ ನೀಡಿದ್ದಾರೆ.
ರಸ್ತೆ ಅಪಘಾತದ ಮಾಹಿತಿ ಮೇರೆಗೆ ಪೊಲೀಸ್ ವರಿಷ್ಠಾಧಿಕಾರಿ ದೇವೇಶ್ ಕುಮಾರ್ ಪಾಂಡೆ, ಸಿಒ ಗೋಪಾಲ್ ಸಿಂಗ್, ಉಪ ಜಿಲ್ಲಾಧಿಕಾರಿ ಸದಾಬಾದ್ ಸಂಜಯ್ ಕುಮಾರ್, ತಹಶೀಲ್ದಾರ್ ಅನಿಲ್ ಕುಮಾರ್, ನಾಯಬ್ ತಹಶೀಲ್ದಾರ್ ಸತ್ಯೇಂದ್ರ ಚೌಧರಿ ಮತ್ತು ಇತರ ಅಧಿಕಾರಿಗಳು ಸದಾಬಾದ್‌ನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು.
ಬಸ್ಗಳ ನಡುವೆ ಭೀಕರ ಅಪಘಾತ: ಎರಡು ಟ್ರಾವೆಲ್ ಬಸ್ಗಳ ಮಧ್ಯೆ ಅಪಘಾತ ನಡೆದು 6 ಜನ ಪ್ರಯಾಣಿಕರು ಸಾವನ್ನಪ್ಪಿ, 25 ಪ್ರಯಾಣಿಕರು ಗಾಯಗೊಂಡಿರುವ ಭೀಕರ ಘಟನೆ ಇತ್ತೀಚೆಗೆ ಮುಂಬೈ ನಾಗ್ಪುರ ಹೆದ್ದಾರಿಯ ಲಕ್ಷ್ಮಿ ನಗರ ಮಲ್ಕಾಪುರ ಬಳಿಯ ಫ್ಲೈಓವರ್ ಮೇಲೆ ಸಂಭವಿಸಿತ್ತು. ಅಪಘಾತವಾದ ಬಸ್ ಟ್ರಾವೆಲ್ಸ್ ಸಂಖ್ಯೆ MH 08. 9458 ಆಗಿದ್ದು, ಅಮರನಾಥ ತೀರ್ಥಯಾತ್ರೆಯಿಂದ ಹಿಂತಿರುಗಿ ಹಿಂಗೋಲಿಗೆ ಹೋಗುತ್ತಿತ್ತು. ಈ ಬಸ್ನಲ್ಲಿ ಒಟ್ಟು 35 ರಿಂದ 40 ಯಾತ್ರಿಗಳಿದ್ದರು. ಇನ್ನು ಟ್ರಾವೆಲ್ಸ್ ಸಂಖ್ಯೆ MH 27 BX 4466 ಆಗಿದ್ದು ಈ ಬಸ್ ನಾಗ್ಪುರದಿಂದ ನಾಸಿಕ್ ಕಡೆಗೆ ಪ್ರಯಾಣಿಸುತ್ತಿದ್ದು, ಅಪಘಾತದ ಸಂದರ್ಭದಲ್ಲಿ 25 ರಿಂದ 30 ಪ್ರಯಾಣಿಕರಿದ್ದರು.
ಇದನ್ನೂ ಓದಿ: ಎರಡು ಬಸ್ಗಳ ನಡುವೆ ಭೀಕರ ಅಪಘಾತ.. 6 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವು, 25 ಮಂದಿಗೆ ಗಾಯ