ಚೆನ್ನೈ (ತಮಿಳುನಾಡು): ಬಡ್ಡಿರಹಿತ ಸಾಲ ಹಗರಣಕ್ಕೆ ಸಂಬಂಧಿಸಿದಂತೆ 500 ಕೆಜಿ ಚಿನ್ನದ ಆಭರಣಗಳೊಂದಿಗೆ ಪರಾರಿಯಾಗಿದ್ದ ಆರೋಪದ ಮೇಲೆ ತೆಲಂಗಾಣದಲ್ಲಿ ಐವರನ್ನು ಬಂಧಿಸಲಾಗಿದೆ. ಈ ಚಿನ್ನಾಭರಣದ ಒಟ್ಟು ಮೌಲ್ಯ 34 ಕೋಟಿ ರೂ. ಆಗಿದೆ.
ಚೆನ್ನೈನಲ್ಲಿ ರೂಬಿ ಜ್ಯುವೆಲ್ಲರ್ಸ್ ಮತ್ತು ಬ್ಯಾಂಕರ್ಸ್ ಎಂಬ ಹೆಸರಿನ ಚಿನ್ನದ ಆಭರಣ ಅಡಮಾನ ಅಂಗಡಿಯವರು ಇಸ್ಲಾಂ ಧರ್ಮದ ಅನುಯಾಯಿಗಳಿಗಾಗಿ ಬಡ್ಡಿರಹಿತವಾಗಿ ಆಭರಣಗಳನ್ನು ಅಡಮಾನವಿಡುವ ಬಗ್ಗೆ ಜಾಹೀರಾತು ನೀಡಿದ್ದರು.
ಜಾಹೀರಾತಿನಿಂದ ಬಂದ 500 ಕೆಜಿ ಚಿನ್ನದ ಆಭರಣಗಳನ್ನು ಅಂಗಡಿಯವರು ತೆಗೆದುಕೊಂಡು ಪರಾರಿಯಾಗಿದ್ದು, ಈ ಬಗ್ಗೆ ವ್ಯಾಸರ್‌ಪಾಡಿಯ ಉಮರ್ ಅಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ. ಈ ಪ್ರಕರಣವನ್ನು ಕಳೆದ ವರ್ಷ ಮೇ 3 ರಂದು ಆರ್ಥಿಕ ಅಪರಾಧಗಳ ವಿಭಾಗಕ್ಕೆ ವರ್ಗಾಯಿಸಲಾಗಿದೆ.
ಇದರ ಬೆನ್ನಲ್ಲೇ ಹೆಚ್ಚುವರಿ ಪೊಲೀಸ್ ನಿರ್ದೇಶಕ ಅಬಾಶ್ ಕುಮಾರ್, ಆರ್ಥಿಕ ಅಪರಾಧಗಳು ವಿಂಗ್ ಮುಖ್ಯಸ್ಥ ಕಲ್ಪನಾ ನಾಯಕ್ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಮೀನಾ ಮತ್ತು ತಿಲ್ಲೈ ನಡರಾಜನ್ ಇನ್ಸ್‌ಪೆಕ್ಟರ್ ಕಾರ್ತಿಕೇಯನ್, ಕಾನ್‌ಸ್ಟೆಬಲ್‌ಗಳಾದ ಉಮಾಶಂಕರ್, ಸೆಹಗರ್ ಮತ್ತು ಸ್ಟಾಲಿನ್ ತೆಲಂಗಾಣದಲ್ಲಿ ಐವರನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ಸೈಯದ್ ರಘುಮನ್, ಅವರ ಸಹೋದರ ಅನಿಸೂರ್ ರಘುಮನ್ ಮತ್ತು ಉದ್ಯೋಗಿಗಳಾದ ರಿಕಾನಾ, ಸಜಿತಾ ಮತ್ತು ಶಾಹೀನಾ ಎಂದು ಗುರುತಿಸಲಾಗಿದೆ. ಐವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ ಚೆನ್ನೈ ಪುಜಾಲ್ ಜೈಲಿನಲ್ಲಿ ಇರಿಸಲಾಗಿದ್ದು, ತನಿಖೆ ನಡೆಯುತ್ತಿದೆ.