ಚೆನ್ನೈ, ತಮಿಳುನಾಡು : ಶ್ರೀಲಂಕಾ ನೌಕಾಪಡೆ 43 ಭಾರತೀಯ ಮೀನುಗಾರರನ್ನು ಬಂಧಿಸಿದ್ದು, ಆರು ಮೀನುಗಾರಿಕಾ ದೋಣಿಗಳನ್ನು ವಶಪಡಿಸಿಕೊಂಡಿದೆ. ಬಂಧಿಸಲ್ಪಟ್ಟ ಮೀನುಗಾರರನ್ನು ಶ್ರೀಲಂಕಾದ ಕಂಗೆಸಂತುರೈ ಶಿಬಿರದಲ್ಲಿ ಇರಿಸಲಾಗಿದೆ ಎಂದು ತಮಿಳುನಾಡಿನ ಮೀನುಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತ್ತೊಂದೆಡೆ ಮೀನುಗಾರರ ಬಂಧನ ಖಂಡಿಸಿ, ಮೀನುಗಾರರ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ. ಸೋಮವಾರ ತಮಿಳುನಾಡು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಕರೆ ನೀಡಿವೆ.
ತಮಿಳುನಾಡಿನ ಮೀನುಗಾರಿಕಾ ಇಲಾಖೆಯ ಅಧಿಕಾರಿಯೊಬ್ಬರು ಐಎಎನ್‌ಎಸ್‌ನೊಂದಿಗೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ತಮಿಳುನಾಡಿನ ಮೀನುಗಾರರ ಮೇಲೆ ಶ್ರೀಲಂಕಾ ನೌಕಾಪಡೆಯ ಸಿಬ್ಬಂದಿ ಆಗಾಗ ಈ ರೀತಿ ವರ್ತಿಸುತ್ತಿರುತ್ತಾರೆ. ಇತ್ತೀಚೆಗೆ ರಾಮನಾಥಪುರದ ಮೀನುಗಾರ ರಾಜ್ ಕಿರಣ್ (30) ಎಂಬಾತ ಶ್ರೀಲಂಕಾ ನೌಕಾಪಡೆಯ ದಾಳಿಯಲ್ಲಿ ಶ್ರೀಲಂಕಾ ನೌಕಾಪಡೆಯ ದಾಳಿಯಲ್ಲಿ ಸಾವನ್ನಪ್ಪಿದ್ದ ಎಂದು ತಿಳಿಸಿದ್ದಾರೆ.
ರಾಮೇಶ್ವರಂನಿಂದ ಸುಮಾರು 500 ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಆದರೆ ಕಚ್ಚತೀವು ಬಳಿ ಶ್ರೀಲಂಕಾ ನೌಕಾಪಡೆ ದಾಳಿ ನಡೆಸಿ ಸುಮಾರು 43 ಮೀನುಗಾರರನ್ನು ಬಂಧಿಸಿದೆ.
6 ದೋಣಿಗಳನ್ನು ವಶಕ್ಕೆ ಪಡೆದಿದೆ ಎಂದು ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತಂತೆ ಈಗಾಗಲೇ ತಮಿಳುನಾಡಿನ ಕೆಲ ರಾಜಕೀಯ ಪಕ್ಷಗಳ ಮುಖಂಡರು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿದ್ದಾರೆ.
ತಮಿಳುನಾಡಿನ ಮೀನುಗಾರರ ಬಿಡುಗಡೆಗೆ ಶ್ರೀಲಂಕಾದ ಅಧಿಕಾರಿಗಳೊಂದಿಗೆ ತಕ್ಷಣ ಮಾತನಾಡುವಂತೆ ಮನವಿ ಮಾಡಿದ್ದಾರೆ. ಕೇಂದ್ರ ಮೀನುಗಾರಿಕೆ ಇಲಾಖೆಯ ರಾಜ್ಯ ಸಚಿವ ಎಲ್.ಮುರುಗನ್ ಈಗಾಗಲೇ ಉನ್ನತ ಅಧಿಕಾರಿಗಳೊಂದಿಗೆ ಈ ಕುರಿತಂತೆ ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ: ಶೆಲ್ ಆಕಸ್ಮಿಕ ಸ್ಫೋಟ : ಓರ್ವ ಬಿಎಸ್ಎಫ್ ಯೋಧ ಹುತಾತ್ಮ, 8 ಮಂದಿಗೆ ಗಾಯ