ಚೆನ್ನೈ: ನಗರದ ಪಲವಕ್ಕಮ್ ಪ್ರದೇಶದ ಇಸಿಆರ್ ರಸ್ತೆಯಲ್ಲಿ ನಿರ್ಲಕ್ಷ್ಯದಿಂದ ಮತ್ತು ಅಡ್ಡಾದಿಡ್ಡಿಯಾಗಿ ರೇಸಿಂಗ್ ಬೈಕ್ ಚಲಾಯಿಸಿ ಅಪಘಾತ ಮಾಡಿದ ಯುವಕ ಪಾದಚಾರಿಯೊಬ್ಬನ ಸಾವಿಗೆ ಕಾರಣನಾಗಿದ್ದ. ಬೈಕ್ ಆತನ ತಂದೆಯ ಹೆಸರಲ್ಲಿ ರಜಿಸ್ಟರ್ ಆಗಿದ್ದು, ಈಗ ಆತನ ತಂದೆ ಇವನ ಅಪರಾಧಕ್ಕಾಗಿ 41.42 ಲಕ್ಷ ರೂಪಾಯಿ ಪರಿಹಾರ ನೀಡಬೇಕಿದೆ.
ಮೋಟಾರು ಅಪಘಾತಗಳ ಹಕ್ಕು ನ್ಯಾಯಮಂಡಳಿಯ ಮುಖ್ಯ ನ್ಯಾಯಾಧೀಶ ಟಿ ಚಂದ್ರಶೇಖರನ್ ಅವರು ಇತ್ತೀಚೆಗೆ ಈ ಕುರಿತು ತೀರ್ಪು ನೀಡಿದ್ದಾರೆ. ಸಂತ್ರಸ್ತೆಯ ತಾಯಿ ಮತ್ತು ಪತ್ನಿ 22.25 ಲಕ್ಷ ರೂ. ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದರು.
ಆದರೆ, ವಾಹನಕ್ಕೆ ವಿಮೆ ಮಾಡಿಸದ ಕಾರಣ ಮತ್ತು ಯುವಕ ವಾಹನ ಚಾಲನಾ ಪರವಾನಗಿ ಹೊಂದಿಲ್ಲದ ಕಾರಣದಿಂದ ನ್ಯಾಯಾಧೀಶರು ಸುಮಾರು ದುಪ್ಪಟ್ಟು ಪರಿಹಾರ ನೀಡುವಂತೆ ಆದೇಶಿಸಿದ್ದು, ಬೈಕ್ ಸವಾರ ಮತ್ತು ಆತನ ತಂದೆಯ ಮೇಲೆ ಇದರ ಜವಾಬ್ದಾರಿ ಹೊರಿಸಿದ್ದಾರೆ.
ಮೃತ ಜೋಸೆಫ್ ಪ್ಲಂಬರ್ ಮತ್ತು ಫುಡ್ ಡೆಲಿವರಿ ಏಜೆಂಟ್ ಆಗಿದ್ದರು. ಜುಲೈ 15, 2018 ರಂದು ಮುಂಜಾನೆ ಪಲವಕ್ಕಮ್ ಹತ್ತಿರದ ಚಹಾ ಅಂಗಡಿಗೆ ತನ್ನ ಸ್ನೇಹಿತನೊಂದಿಗೆ ಹೊರಟಿದ್ದಾಗ ದಿನೇಶ್ ಕುಮಾರ್ ಎಂಬಾತ ಆತನಿಗೆ ಮಾರಣಾಂತಿಕವಾಗಿ ಬೈಕ್ ಡಿಕ್ಕಿ ಹೊಡೆಸಿದ್ದ.
ಪರಿಹಾರದ ಮೊತ್ತವನ್ನು ಬೈಕ್ ಮಾಲೀಕ (ತಂದೆ) ಮತ್ತು ಸವಾರ (ಮಗ) ಜಂಟಿಯಾಗಿ ಮತ್ತು ಪ್ರಕರಣ ದಾಖಲಾದ ದಿನಾಂಕದಿಂದ 7.5 ಪ್ರತಿಶತ ಬಡ್ಡಿಯೊಂದಿಗೆ ಮೂರು ತಿಂಗಳೊಳಗೆ ಪಾವತಿಸಬೇಕು ಎಂದು ನ್ಯಾಯಾಧೀಶರು ಹೇಳಿದರು. ದಿನೇಶ್ ಕುಮಾರ್ ಅವರ ಅಜಾಗರೂಕ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಇದನ್ನೂ ಓದಿ: 'ಇದಕ್ಕೆ ಹೇಳೋದು ಹೆಲ್ಮೆಟ್ ಹಾಕ್ಬೇಕು ಅಂತ...' ಎರಡೆರಡು ಸಲ ಅಪಘಾತವಾದ್ರೂ ಬದುಕುಳಿದ ಸವಾರ!