ಮೊರ್ಬಿ: ಗುಜರಾತ್‌ನ ಮೊರ್ಬಿಯಲ್ಲಿ ತೂಗು ಸೇತುವೆ ಕುಸಿದು 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಆದರೆ. ಪವಾಡ ಎಂಬಂತೆ ನಾಲ್ಕು ವರ್ಷದ ಬಾಲಕ ಬದುಕುಳಿದಿದ್ದಾನೆ. ದುಃಖದ ವಿಷಯ ಎಂದರೆ ಈ ಘಟನೆಯಲ್ಲಿ ಬಾಲಕನ ಪೋಷಕರು ಮೃತಪಟ್ಟಿದ್ದಾರೆ.
ಭಾನುವಾರ ಸಂಜೆ ಸೇತುವೆ ಮೇಲೆ 400 ರಿಂದ 500 ಪ್ರವಾಸಿಗರಿದ್ದ ಕೇಬಲ್ ಸೇತುವೆ ಕುಸಿದಿದೆ. ಉಮಾ ಟೌನ್‌ಶಿಪ್‌ನ ನಿವಾಸಿಗಳ ಪ್ರಕಾರ, ಅವರ ನೆರೆ ಹೊರೆಯವರಾದ ಹಾರ್ದಿಕ್ ಫಲ್ದು, ಅವರ ಪತ್ನಿ ಮಿರಾಲ್‌ಬೆನ್, ನಾಲ್ಕು ವರ್ಷದ ಮಗ ಜಿಯಾನ್ಶ್, ಹಾರ್ದಿಕ್ ಅವರ ಸೋದರ ಸಂಬಂಧಿ ಹರ್ಷ್ ಜಲವಾದಿಯಾ ಮತ್ತು ಅವರ ಪತ್ನಿ ಕೇಬಲ್ ಸೇತುವೆ ಭೇಟಿ ಮಾಡಲು ತೆರಳಿದ್ದರು.
ಅಪಘಾತದಲ್ಲಿ ಹಾರ್ದಿಕ್ ಮತ್ತು ಅವರ ಪತ್ನಿ ಮೀರಾಲ್ ಸಾವನ್ನಪ್ಪಿದ್ದಾರೆ. ಆದರೆ, ಜಿಯಾನ್ಶ್ ಅದೃಷ್ಟವಶಾತ್ ಬದುಕುಳಿದಿದ್ದಾರೆ. ಜಿಯಾನ್ಶ್ ಅವರ ಚಿಕ್ಕಪ್ಪ ಹರ್ಷ್ ಸಹ ಬದುಕುಳಿದಿದ್ದಾರೆ. ಚಿಕ್ಕಪ್ಪ ಹರ್ಷ ಗಾಯಗೊಂಡಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಹರ್ಷನ ಪತ್ನಿ ಕೂಡ ಅಪಘಾತದಲ್ಲಿ ಅಸುನೀಗಿದ್ದಾರೆ.
ಉಮಾ ಪಟ್ಟಣದ ನಿವಾಸಿಯೊಬ್ಬರು ಮಾತನಾಡಿ, ಹಾರ್ದಿಕ್ ಅವರು ಹಳವಾಡ ಪಟ್ಟಣದವರಾಗಿದ್ದು, ಸೋಮವಾರ ಪಟ್ಟಣದಲ್ಲಿ ಬಂದ್ ಆಚರಿಸಲಿರುವ ಹಿನ್ನೆಲೆಯಲ್ಲಿ ಮೃತ ಕುಟುಂಬದ ಸದಸ್ಯರ ಶವವನ್ನು ಅಂತ್ಯಸಂಸ್ಕಾರಕ್ಕಾಗಿ ಹಳವಾಡಕ್ಕೆ ಕೊಂಡೊಯ್ಯಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಭಾರಕ್ಕೆ ಕುಸಿಯಿತೇ ಸೇತುವೆ.. ದುರಂತಕ್ಕೂ ಮೊದಲು ಸೇತುವೆಗೆ ಭೇಟಿ ನೀಡಿದ ಕುಟುಂಬ ಹೇಳಿದ್ದೇನು?