ಡೆಹ್ರಾಡೂನ್: ಉತ್ತರಾಖಂಡದ ವಿವಿಧ ಪ್ರದೇಶಗಳಲ್ಲಿ ಕಾಡ್ಗಿಚ್ಚು ಆವರಿಸಿದ್ದು, ಕಳೆದ 24 ಗಂಟೆಗಳಲ್ಲಿ ನಾಲ್ವರು ವ್ಯಕ್ತಿಗಳು ಹಾಗೂ 7 ಪ್ರಾಣಿಗಳು ಮೃತಪಟ್ಟಿರುವುದು ವರದಿಯಾಗಿದೆ.
ನೈನಿತಾಲ್, ಅಲ್ಮೋರಾ, ತೆಹ್ರಿ ಮತ್ತು ಪೌರಿ ಜಿಲ್ಲೆಗಳ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಉಲ್ಬಣಗೊಂಡಿದೆ. 1,290 ಹೆಕ್ಟೇರ್‌ಗಿಂತಲೂ ಹೆಚ್ಚು ಕಾಡು ನಾಶವಾಗಿದೆ. ಕಳೆದ ವರ್ಷ ಕೂಡ ಉತ್ತರಾಖಂಡದಲ್ಲಿ ಕಾಡ್ಗಿಚ್ಚು ಸಂಭವಿಸಿದ್ದು, 172 ಹೆಕ್ಟೇರ್ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿತ್ತು.
ರಾಜ್ಯ ಅರಣ್ಯ ಇಲಾಖೆಯ 12,000 ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈವರೆಗೆ 37 ಲಕ್ಷ ರೂ. ಮೌಲ್ಯದ ಆಸ್ತಿ-ಪಾಸ್ತಿ ಕೂಡ ನಾಶವಾಗಿದೆ ಎಂದು ಅಗ್ನಿಶಾಮಕ ಇಲಾಖೆಯ ಪ್ರಧಾನ ಸಂರಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಡೆಡ್ಲಿ ವ್ಹೀಲಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಯುವಕರು ಅರೆಸ್ಟ್
ಏಪ್ರಿಲ್‌ನಲ್ಲಿ ರಾಜ್ಯದಲ್ಲಿ ಗರಿಷ್ಠ ತಾಪಮಾನ ತಲುಪುವ ಮುನ್ನವೇ ಕಾಡು ಹೊತ್ತಿ ಉರಿಯುತ್ತಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಬೆಂಕಿ ನಂದಿಸಲು ಭಾರತೀಯ ವಾಯುಪಡೆಯ (ಐಎಂಎಫ್) ಹೆಲಿಕಾಪ್ಟರ್ಗಳನ್ನು ಕಳುಹಿಸುವಂತೆ ರಾಜ್ಯ ಸರ್ಕಾರ ಕೇಂದ್ರ ರಕ್ಷಣಾ ಇಲಾಖೆಗೆ ಪತ್ರ ಬರೆದಿದೆ.