ಅಹಮದಾಬಾದ್: ನಗರದ ಬಿರಾಟ್ ನಗರದಿಂದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ದಿವ್ಯಪ್ರಭಾ ಸೊಸೈಟಿಯ ಮನೆಯೊಂದರಲ್ಲಿ ದುರ್ವಾಸನೆ ಬರುತ್ತಿದ್ದ ಹಿನ್ನೆಲೆ ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಒಂದೇ ಕುಟುಂಬದ ನಾಲ್ವರ ಶವ ಪತ್ತೆಯಾಗಿದೆ. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಗಾಗಿ ಜಾಲ ಬೀಸಿದ್ದಾರೆ.
ಏನಿದು ಘಟನೆ?: ಬಿರಾಟ್‌ನಗರದಲ್ಲಿರುವ ದಿವ್ಯಪ್ರಭಾ ಸೊಸೈಟಿಯಲ್ಲಿ ಮನೆಯೊಂದರಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮನೆ ಪರಿಶೀಲನೆ ನಡೆಸಿದ್ದರು. ಈ ವೇಳೆ, ಕೊಳೆತ ಸ್ಥಿತಿಯಲ್ಲಿ ನಾಲ್ಕು ಶವಗಳು ಪತ್ತೆಯಾಗಿವೆ. ಕೊಲೆ ಅಥವಾ ಆತ್ಮಹತ್ಯೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಪ್ರಾಥಮಿಕ ತನಿಖೆ ಆಧಾರದ ಮೇಲೆ ಮನೆ ಮಾಲೀಕ ವಿನೋದ್ ಮರಾಠಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಮನೆಯಲ್ಲಿ ನಡೆದ ಜಗಳವೇ ಕೊಲೆಗೆ ಕಾರಣ ಎಂದು ಪೊಲೀಸರ ಅಂದಾಜಿಸಿದ್ದಾರೆ.
ಓದಿ: ಬಿಮ್ಸ್ಟೆಕ್ಗೆ ಭಾರತದಿಂದ ಒಂದು ಮಿಲಿಯನ್ ಡಾಲರ್ ನೆರವು : ಪ್ರಧಾನಿ ಮೋದಿ
ಆರೋಪಿ ಪತ್ತೆಗೆ ಬಲೆ ಬೀಸಿದ ಪೊಲೀಸರು: ಒಂದೇ ಕುಟುಂಬದ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಕುಟುಂಬದ ಮುಖ್ಯಸ್ಥ ವಿನೋದ್ ಮರಾಠಿ ನಾಪತ್ತೆಯಾಗಿದ್ದಾರೆ. ಹೀಗಾಗಿ ಆತನ ಮೇಲೆ ಅನುಮಾನ ವ್ಯಕ್ತವಾಗಿದ್ದು, ಈ ಕುರಿತು ತನಿಖೆ ನಡೆಸಲು ವಿವಿಧ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯಲ್ಲಿ ಎಫ್‌ಎಸ್‌ಎಲ್ ತಂಡ : ಇದಲ್ಲದೇ ಪೊಲೀಸರು ಸಿಸಿಟಿವಿ ಮತ್ತು ಫೋನ್ ಕರೆ ವಿವರಗಳಿಂದಲೂ ತನಿಖೆ ಆರಂಭಿಸಿದ್ದಾರೆ. ಪೊಲೀಸರು ಎಫ್‌ಎಸ್‌ಎಲ್ ಮತ್ತು ಶ್ವಾನ ದಳದ ಸಹಾಯವನ್ನೂ ಪಡೆಯಲಿದ್ದಾರೆ. ಅಹಮದಾಬಾದ್ ಸಿಟಿ ಕ್ರೈಂ ಬ್ರಾಂಚ್ ತಂಡವೂ ತನಿಖೆಯಲ್ಲಿ ತೊಡಗಿದೆ. ಪರಾರಿಯಾಗಿರುವ ವಿನೋದ್ ಮರಾಠಿ ತನ್ನ ಪತ್ನಿಯನ್ನು ಅಕ್ರಮ ಸಂಬಂಧದ ಶಂಕೆಯಿಂದ ಕೊಲೆ ಮಾಡಿರಬಹುದೆಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಓದಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ: ಮಾಜಿ ಸಿಎಂ ಬಿಎಸ್ವೈ ಸ್ಪಷ್ಟನೆ
ನಾಲ್ವರನ್ನೂ ಹತ್ಯೆ ಮಾಡಿರುವ ಶಂಕೆ : ಮೃತರಲ್ಲಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಮಕ್ಕಳು ಸೇರಿದ್ದಾರೆ. ಮೃತರನ್ನು ಅತ್ತೆ ಸೋನಾಲ್ ಮರಾಠಿ, ಪ್ರಗತಿ ಮರಾಠಿ, ಗಣೇಶ ಮರಾಠಿ, ಸುಭದ್ರಾ ಮರಾಠಿ ಎಂದು ಗುರುತಿಸಲಾಗಿದೆ. ಇವರನ್ನು ಚುಪಾದ ಆಯುಧದಿಂದ ಕೊಲೆ ಮಾಡಿರುವ ಶಂಕೆ ಇದೆ. ಈ ಹಿಂದೆ ಮನೆಯ ಮಾಲೀಕ ವಿನೋದ ಮರಾಠಿ ತನ್ನ ಅತ್ತೆಯೊಂದಿಗೆ ಜಗಳವಾಡಿ ಚಾಕುವಿನಿಂದ ಇರಿದಿದ್ದ ಎಂದು ತಿಳಿದು ಬಂದಿದೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.