ಮಯೂರ್‌ಭಂಜ್: ಟ್ರ್ಯಾಕ್ಟರ್ವೊಂದು 15 ಅಡಿಗಳ ಆಳಕ್ಕೆ ಉರುಳಿಬಿದ್ದ ಪರಿಣಾಮ ಬಾಲಕ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಜಾರ್ಪೋಖರಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಮುರುನಿಯಾ ಗ್ರಾಮದ ಬಳಿ ಸಂಭವಿಸಿದೆ.
ಮೂಲಗಳ ಪ್ರಕಾರ, ಒಡಿಶಾ-ಜಾರ್ಖಂಡ್ ಗಡಿಯಲ್ಲಿರುವ ದಮಾನಿಸಾಹಿಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ 30ಕ್ಕೂ ಹೆಚ್ಚು ಕಲಾವಿದರು ಟ್ರ್ಯಾಕ್ಟರ್ ಮೂಲಕ ಬಾಗ್ಬುಡಾ ಗ್ರಾಮಕ್ಕೆ ಮರಳುತ್ತಿತ್ತು.
ನಡು ದಾರಿಯಲ್ಲಿ ಟ್ರ್ಯಾಕ್ಟರ್ ಚಾಲಕ ನಿಯಂತ್ರಣ ಕಳೆದುಕೊಂಡಿದ್ದು, ವಾಹನವು ರಸ್ತೆಯಿಂದ 15 ಅಡಿ ಕೆಳಗೆ ಬಿದ್ದು ಪಲ್ಟಿಯಾಗಿದೆ. ಪರಿಣಾಮ ಬಾಲಕ ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳೀಯರು ರಕ್ಷಣಾ ಕಾರ್ಯ ಕೈಗೊಂಡು ಪೊಲೀಸರಿಗೆ ಮಾಹಿತಿ ನೀಡಿದರು. ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸ್ಥಳೀಯರೊಂದಿಗೆ ರಕ್ಷಣಾ ಕಾರ್ಯ ಮುಂದುವರಿಸಿದರು.
ಘಟನೆಯಲ್ಲಿ 25ಕ್ಕೂ ಹೆಚ್ಚು ಕಲಾವಿದರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಕುರಿತು ಜಾರ್ಪೋಖರಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.