ಶಿಮ್ಲಾ (ಹಿಮಾಚಲ ಪ್ರದೇಶ) : ಕಾಂಗ್ರಾ ಜಿಲ್ಲೆಯ ಪಾಂಗ್ ವನ್ಯಜೀವಿ ಅಭಯಾರಣ್ಯದಲ್ಲಿ ಗುರುವಾರ ಮತ್ತೆ 381 ಹಕ್ಕಿಗಳ ಮೃತದೇಹ ಪತ್ತೆಯಾಗಿದ್ದು, ಇದುವರೆಗೆ ಸತ್ತ ವಲಸೆ ಹಕ್ಕಿಗಳ ಸಂಖ್ಯೆ 3,409 ಕ್ಕೆ ತಲುಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ, ಪಾಂಗ್ ಗದ್ದೆ ಸಮೀಪದ ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಲ್ಲಿ 64 ಕಾಗೆಗಳು ಸತ್ತಿವೆ. ಬಿಲಾಸ್ಪುರ್ ಜಿಲ್ಲೆಯಲ್ಲೂ ಹಲವು ಕಾಗೆಗಳ ಮೃತದೇಹ ಪತ್ತೆಯಾಗಿದ್ದು, ಅವುಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೆಚ್ 5 ಎನ್ 1 ಇನ್ಫ್ಯುಯೆನ್ಝಾ ವೈರಸ್ ಅಥವಾ ಹಕ್ಕಿ ಜ್ವರದಿಂದಲೇ ಈ ಹಕ್ಕಿಗಳು ಸತ್ತಿರಬಹುದೆಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದು, ಡೆಹ್ರಾಡೂನ್ ಮೂಲದ ವೈಲ್ಡ್ ಲೈಫ್ ಇನ್ಸಿಟ್ಯೂಟ್ ಆಫ್ ಇಂಡಿಯಾದ ತಜ್ಞರ ತಂಡವು ಪಾಂಗ್ ಗದ್ದೆ ಪ್ರದೇಶಕ್ಕೆ ಭೇಟಿ ನೀಡಿ ಪಕ್ಷಿಗಳ ಸಾವಿನ ಬಗ್ಗೆ ಪರಿಶೀಲನೆ ನಡೆಸಿದ್ದಾರೆ ಎಂದು ಮುಖ್ಯ ವನ್ಯಜೀವಿ ವಾರ್ಡನ್ ಅರ್ಚನಾ ಶರ್ಮಾ ತಿಳಿಸಿದ್ದಾರೆ.
ಓದಿ : ಭಾರತದ ಮೇಲೆ ಮತ್ತೊಂದು ಮಾರಕ ವೈರಸ್ ದಾಳಿ... ಹಕ್ಕಿಜ್ವರ ಕುರಿತು ನಿರ್ಲಕ್ಷ್ಯ ಬೇಡ..!
ಸತ್ತ ಪಕ್ಷಿಗಳ ಶವಗಳನ್ನು ತಕ್ಷಣ ವಿಲೇವಾರಿ ಮಾಡಲು ಅಭಯಾರಣ್ಯ ಪ್ರದೇಶದಲ್ಲಿ 9 ಪಾಳಿಗಳಲ್ಲಿ 10 ಕ್ಷಿಪ್ರ ಪ್ರತಿಕ್ರಿಯೆ ತಂಡಗಳು ಕಾರ್ಯನಿರ್ವಹಿಸುತ್ತಿವೆ. ದೈನಂದಿನ ಕಣ್ಗಾವಲು ಕಾರ್ಯಾಚರಣೆಗಾಗಿ ಐವತ್ತೈದು ಜನರನ್ನು ನಿಯೋಜಿಸಲಾಗಿದೆ. ಅಲ್ಲದೇ, ಹಕ್ಕಿ ಜ್ವರ ಹರಡುವಿಕೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಸ್ವೀಕರಿಸಲು ಮತ್ತು ಪ್ರಸಾರ ಮಾಡಲು ನಾಗ್ರೋಟಾ ಸೂರಿಯನ್ನಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ ಎಂದು ಶರ್ಮಾ ಮಾಹಿತಿ ನೀಡಿದ್ದಾರೆ.
ಶುಕ್ರವಾರ ಧರ್ಮಶಾಲಾದಲ್ಲಿ ವನ್ಯಜೀವಿ, ಪಶುಸಂಗೋಪನೆ, ಆರೋಗ್ಯ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.