ದೌಸಾ (ರಾಜಸ್ಥಾನ್): ಕೊರೊನಾ 2ನೇ ಅಲೆಯಲ್ಲಿ ಮಕ್ಕಳು ಹೆಚ್ಚಾಗಿ ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂಬ ಆತಂಕದ ನಡುವೆಯೇ ರಾಜಸ್ಥಾನದ ಒಂದೇ ಜಿಲ್ಲೆಯಲ್ಲಿ ಬರೋಬ್ಬರಿ 341 ಮಕ್ಕಳಿಗೆ ಕೊರೊನಾ ಸೋಂಕು ದೃಢವಾಗಿದೆ.
ಕಳೆದ 21 ದಿನದಲ್ಲಿ 18 ವರ್ಷದೊಳಗಿನ 341 ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ ಎಂದು ದೌಸಾ ಜಿಲ್ಲಾಡಳಿತ ಮಾಹಿತಿ ನೀಡಿದೆ. ಅಲ್ಲದೆ ಇದು ಸಂಭವನೀಯ 3ನೇ ಅಲೆಯೂ ಆಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಯಾವುದೇ ಗಂಭೀರ ಪ್ರಕರಣ ವರದಿಯಾಗಿಲ್ಲ ಎಂದು ತಿಳಿದುಬಂದಿದೆ.
ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಈವರೆಗೆ ಸುಮಾರು 6, 288 ಪ್ರಕರಣ ಪತ್ತೆಯಾಗಿದ್ದು, ಎಲ್ಲರ ಮೇಲೂ ವೈದ್ಯಕೀಯ ಸಿಬ್ಬಂದಿ ನಿಗಾ ವಹಿಸಿದ್ದಾರೆ. ಕೋವಿಡ್ ದೃಢವಾಗಿದ್ದ ಕುಟುಂಬಸ್ಥರ ಜೊತೆ ಸಂಪರ್ಕ ಬಂದಿದ್ದರಿಂದಲೇ ಮಕ್ಕಳಿಗೆ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ.
ಈ ಕುರಿತು ಜಿಲ್ಲಾಧಿಕಾರಿ ಪಿಯೂಷ್ ಸುಮರಿಯಾ ಪ್ರತಿಕ್ರಿಯಿಸಿದ್ದು, 18 ವರ್ಷದೊಳಗಿನವರಲ್ಲಿ ಸೋಂಕು ಪತ್ತೆಯಾಗುತ್ತಿದೆ, ಆದರೆ ಈವರೆಗೂ ಯಾರೊಬ್ಬರೂ ಆಸ್ಪತ್ರೆಗೆ ದಾಖಲಾಗುವಷ್ಟು ಗಂಭೀರ ಸ್ಥಿತಿಗೆ ತಲುಪಿಲ್ಲ. ಅಲ್ಲದೆ ಕೊರೊನಾ 3ನೇ ನಿಯಂತ್ರಿಸಲು ನಾವು ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ಕೊರೊನಾ ಲಾಕ್ಡೌನ್ ನಡುವೆಯೂ ಮಕ್ಕಳಿಗೂ ಬಿಟ್ಟೂ ಬಿಡದೆ ಕಾಡುತ್ತಿರುವ ಸೋಂಕು..