ಧೂಪ್‌ಗುರಿ/ಪಶ್ಚಿಮ ಬಂಗಾಳ: ಲಸಿಕಾ ಕೇಂದ್ರದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಒಟ್ಟು 30 ಜನರು ಗಾಯಗೊಂಡಿದ್ದಾರೆ. ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಗಾಯಗೊಂಡವರಲ್ಲಿ ಪೊಲೀಸ್ ಸಿಬ್ಬಂದಿ ಸಹ ಸೇರಿದ್ದಾರೆ. ತೀವ್ರವಾಗಿ ಗಾಯಗೊಂಡವರನ್ನು ಜಲ್ಪೈಗುರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರವಾನಿಸಲಾಗಿದೆ.
ಉತ್ತರ ಬಂಗಾಳದ ಧೂಪ್‌ಗುರಿಯಲ್ಲಿರುವ ಬನರಹತ್ ಬ್ಲಾಕ್‌ನಲ್ಲಿ ದುರಮಾರಿ ಚಂದ್ರಕಾಂತ ಹೈ ಸೆಕೆಂಡರಿ ಶಾಲೆಯಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತಿತ್ತು. ಈ ಹಿನ್ನೆಲೆ ಇಂದು ಬೆಳಗ್ಗೆಯಿಂದಲೇ ಶಾಲೆಯ ಗೇಟಿನ ಮುಂದೆ ಲಸಿಕೆಗಾಗಿ ಜನರು ಸರದಿ ಸಾಲಿನಲ್ಲಿ ನಿಂತಿದ್ದರು.
ಜನಸಂದಣಿ ನಿಯಂತ್ರಿಸಲು ಪೊಲೀಸರು ಶಾಲೆಯ ಒಂದು ಸಣ್ಣ ಗೇಟ್ ತೆರೆದರು. ಸರದಿಯಲ್ಲಿ ನಿಂತಿದ್ದ ಜನರು ಆ ಗೇಟಿನ ಮೂಲಕ ಪ್ರವೇಶಿಸಲು ಧಾವಿಸಲು ಆರಂಭಿಸಿದರು. ನಂತರ ದೊಡ್ಡ ಗೇಟಿನ ಬೀಗ ಮುರಿದು ಎಲ್ಲರೂ ಒಮ್ಮೆಲೆ ಲಸಿಕಾ ಕೇಂದ್ರದೊಳಗೆ ನುಗ್ಗಲು ಆರಂಭಿಸಿದ್ದರಿಂದ ಕಾಲ್ತುಳಿತ ಉಂಟಾಗಿ ಗಾಯಗೊಂಡರು.
ಘಟನೆ ಬಳಿಕ ಲಸಿಕಾ ಕೇಂದ್ರದ ಬಳಿ ಉದ್ವಿಘ್ನ ವಾತಾವರಣ ಏರ್ಪಟ್ಟಿದೆ. ಕಾಲ್ತುಳಿತ ಉಂಟಾಗಿ ಗಾಯಗೊಂಡರೂ ಲಸಿಕಾ ಕೇಂದ್ರಕ್ಕೆ ಬರುವವರ ಸಂಖ್ಯೆ ಕಡಿಮೆ ಆಗಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಜಲ್ಪೈಗುರಿ ಜಿಲ್ಲಾ ಮ್ಯಾಜಿಸ್ಟ್ರೇಟ್, ಮೌಮಿತಾ ಗೋದರಾ ಪ್ರಕರಣ ಕುರಿತು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ತನಿಖೆ ಮಾಡುತ್ತಿದ್ದಾರೆ ಎಂದು ಹೇಳಿದರು. ಸದ್ಯಕ್ಕೆ ಈ ಕೇಂದ್ರದಲ್ಲಿ ಲಸಿಕೆ ಹಾಕುವ ಪ್ರಕ್ರಿಯೆ ನಿಲ್ಲಿಸಲಾಗಿದೆ ಎಂದು ಅವರು ಹೇಳಿದರು.
ಈ ದುರ್ಘಟನೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯೇ ನೇರ ಹೊಣೆ ಎಂದು ಬಿಜೆಪಿಯ ಜಲ್ಪೈಗುರಿ ಜಿಲ್ಲಾ ಉಪಾಧ್ಯಕ್ಷ ಅಲೋಕ್ ಚಕ್ರಪರ್ತಿ ಆರೋಪಿಸಿದ್ದಾರೆ. ಮುಖ್ಯಮಂತ್ರಿ ತನ್ನ ಸರ್ಕಾರವು ಜನರ ಮನೆಬಾಗಿಲನ್ನು ತಲುಪಿದೆ ಎಂದು ಹೇಳುತ್ತಾರೆ.ಲಸಿಕೆಗಳನ್ನು ಮನೆ ಬಾಗಿಲಿಗೆ ಏಕೆ ತಲುಪಿಸಿಲ್ಲ? ಎಂದು ದೀದಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಮಂಗಳೂರು ಕೋರ್ಟ್ನ ಆರನೇ ಮಹಡಿಯಿಂದ ಹಾರಿ ಆರೋಪಿ ಆತ್ಮಹತ್ಯೆ!