ಡೆಹ್ರಾಡೂನ್ (ಉತ್ತರಾಖಂಡ): 2024 ರ ಫೆಬ್ರವರಿ-ಮಾರ್ಚ್ ತಿಂಗಳೊಳಗೆ ವಂದೇ ಭಾರತ್ ರೈಲುಗಳ ಮೂರು ಆವೃತ್ತಿಗಳಾದ ವಂದೇ ಚೇರ್ ಕಾರ್, ವಂದೇ ಮೆಟ್ರೋ ಮತ್ತು ವಂದೇ ಸ್ಲೀಪರ್ಸ್ ಬರಲಿವೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈಗಾಗಲೇ ಇರುವ ಶತಾಬ್ದಿ, ರಾಜಧಾನಿ ಮತ್ತು ಸ್ಥಳೀಯ ರೈಲುಗಳನ್ನು ಬದಲಿಸಲು ಸ್ಥಳೀಯ ಸೆಮಿ-ಹೈ ವೇಗದ ರೈಲುಗಳನ್ನು ಚೆನ್ನೈನ ಇಂಟಿಗ್ರೇಟೆಡ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಿಸಲಾಗುತ್ತಿದೆ. ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ ವಂದೇ ಭಾರತ್ ರೈಲುಗಳ ಗರಿಷ್ಠ 160 ಕಿ.ಮೀ ವೇಗವನ್ನು ತಲುಪಲು ರೈಲ್ವೆ ಹಳಿಗಳನ್ನು ಕೂಡ ನವೀಕರಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ವಿಶೇಷತೆಗಳೇನು?: ವಂದೇ ಭಾರತ್‌ನ ಮೂರು ಸ್ವರೂಪಗಳಾದ ವಂದೇ ಮೆಟ್ರೋ 100 ಕಿಲೋ ಮೀಟರ್‌ಗಿಂತ ಕಡಿಮೆ ಪ್ರಯಾಣಕ್ಕಾಗಿ, ವಂದೇ ಚೇರ್ ಕಾರ್ 100- 550 ಕಿಲೋ ಮೀಟರ್ ಪ್ರಯಾಣಕ್ಕಾಗಿ ಮತ್ತು ವಂದೇ ಸ್ಲೀಪರ್ಸ್ 550 ಕಿಲೋ ಮೀಟರ್‌ಗಿಂತ ಹೆಚ್ಚಿನ ಪ್ರಯಾಣಕ್ಕಾಗಿ ಇರಲಿವೆ. ಈ ಮೂರು ರೈಲುಗಳು ಮುಂದಿನ ವರ್ಷದ ಫೆಬ್ರವರಿ-ಮಾರ್ಚ್ ವೇಳೆಗೆ ಸಂಚಾರಕ್ಕೆ ಮುಕ್ತವಾಗಲಿವೆ.
ನಿನ್ನೆ ಪ್ರಧಾನಿ ಮೋದಿ ಉತ್ತರಾಖಂಡ್ ರಾಜಧಾನಿ ಡೆಹ್ರಾಡೂನ್ ಮತ್ತು ರಾಷ್ಟ್ರ ರಾಜಧಾನಿ ದೆಹಲಿ ನಡುವೆ ಸಂಪರ್ಕ ಬೆಸೆಯುವ ಸೆಮಿ ಹೈಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದ್ದರು. ಇದು ಉತ್ತರಾಖಂಡ್ನ ಮೊದಲ ವಂದೇ ಭಾರತ್ ರೈಲು ಆಗಿದೆ. ವರ್ಚುವಲ್ ಕಾರ್ಯಕ್ರಮದ ಮೂಲಕ ಮೋದಿ ರೈಲಿಗೆ ಚಾಲನೆ ನೀಡಿದ್ದರು. ಪ್ರಯಾಣಿಕರಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಈ ರೈಲು ಡೆಹ್ರಾಡೂನ್‌ನಿಂದ ದೆಹಲಿಯನ್ನು 4 ಗಂಟೆ 40 ನಿಮಿಷಗಳಲ್ಲಿ ತಲುಪುತ್ತದೆ.
ಜೂನ್‌ಗೆ ಎಲ್ಲ ರಾಜ್ಯಗಳಿಗೆ ವಂದೇ ಭಾರತ್ ರೈಲು: ಋಷಿಕೇಶ ಮತ್ತು ಕರ್ಣಪ್ರಯಾಗ ನಡುವಿನ ರೈಲು ಸಂಪರ್ಕ ಯೋಜನೆ ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಗಡಿ ಭಾಗದಲ್ಲಿರುವ ಹಳ್ಳಿಗಳನ್ನು ಸಂಪರ್ಕಿಸುವಲ್ಲಿ ರೈಲ್ವೆ ಕೆಲಸ ಮಾಡುತ್ತಿದೆ. ಜೂನ್ ಮಧ್ಯಕ್ಕೆ ಬಹುತೇಕ ಎಲ್ಲಾ ರಾಜ್ಯಗಳು ವಂದೇ ಭಾರತ್ ರೈಲು ಪಡೆಯಲಿವೆ ಎಂದು ಸಚಿವರು ಹೇಳಿದ್ದಾರೆ. ಈ ಎಲ್ಲ ರೈಲುಗಳ ಉತ್ಪಾದನೆಯನ್ನು ತ್ವರಿತಗೊಳಿಸಲಾಗುತ್ತಿದೆ. ವಂದೇ ಭಾರತ್ ರೈಲುಗಳನ್ನು ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾಗುತ್ತಿದೆ. ಆದರೆ ಟ್ರ್ಯಾಕ್ ಸಾಮರ್ಥ್ಯದ ಪ್ರಕಾರ ಅವು ಸದ್ಯಕ್ಕೆ ಗಂಟೆಗೆ 130 ಕಿ.ಮೀ ವೇಗದಲ್ಲಿ ಚಲಿಸುತ್ತಿವೆ.
ಹಳೆ ರೈಲು ಟ್ರ್ಯಾಕ್‌ಗಳನ್ನು ಗಂಟೆಗೆ 70 ರಿಂದ 80 ಕಿ.ಮೀ ವೇಗದಲ್ಲಿ ಸಂಚರಿಸಲು ಸಹಾಯವಾಗುವಂತೆ ಸಿದ್ದಪಡಿಸಲಾಗಿದೆ. ಸುಮಾರು 25,000- 35,000 ಕಿಲೋ ಮೀಟರ್‌ಗಳ ಟ್ರ್ಯಾಕ್‌ಗಳನ್ನು 110 kmph, 130 kmph ಮತ್ತು 160 kmph ವೇಗಕ್ಕೆ ಅನುವಾಗುವಂತೆ ನವೀಕರಿಸಲಾಗುತ್ತಿದೆ. ಇವು ಮುಂದಿನ 3-4 ವರ್ಷಗಳಲ್ಲಿ ಚಾಲ್ತಿಗೆ ಬರಲಿವೆ. 2027- 28 ರ ಹೊತ್ತಿಗೆ 20,000-30,000 ಕಿಲೋ ಮೀಟರ್ ಟ್ರ್ಯಾಕ್ ವಂದೇ ಭಾರತ್ ರೈಲುಗಳನ್ನು 160 ಕಿ.ಮೀ ವೇಗದಲ್ಲಿ ಓಡಿಸಲು ಸಾಧ್ಯವಾಗಲಿದೆ. ಹೈಸ್ಪೀಡ್ ರೈಲುಗಳನ್ನು ಬೆಂಬಲಿಸಲು ರೈಲ್ವೇ ಓವರ್‌ಹೆಡ್ ವಿದ್ಯುತ್ ಮಾರ್ಗಗಳನ್ನು ಸಹ ನವೀಕರಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಜಾನುವಾರುಗಳ ಓಡಾಟಕ್ಕೆ ತಡೆ: ರೈಲ್ವೆ ಹಳಿಗಳ ಮೇಲೆ ಇದ್ದಕ್ಕಿದ್ದಂತೆ ಜಾನುವಾರು ಬರುವುದರಿಂದ ಈವರೆಗೆ ಅಪಘಾತಗಳು ಸಂಭವಿಸಿವೆ. ಇನ್ನು ಮುಂದೆ ಇದನ್ನು ತಡೆಗಟ್ಟಲು ರೈಲ್ವೆ ಹಳಿಗಳ ಉದ್ದಕ್ಕೂ ಬೇಲಿ ಹಾಕುವ ಕೆಲಸ ಮಾಡಲಾಗುತ್ತಿದೆ. ತಡೆ ಬೇಲಿಗಾಗಿ ಅತ್ಯಂತ ವಿಶಿಷ್ಟವಾದ ವಿನ್ಯಾಸವನ್ನು ಅಭಿವೃದ್ಧಿಪಡಿಸಲಾಗಿದೆ. ಬೇಲಿಗಳ ಎತ್ತರ ಸುಮಾರು ಐದು ಅಡಿ ಇದ್ದು ಮತ್ತು ಎರಡು ಅಡ್ಡ ತಡೆಗಳನ್ನೂ ಹೊಂದಿದೆ. ಇದನ್ನು ಮುಂಬೈ ಮತ್ತು ಅಹಮದಾಬಾದ್ ನಡುವಿನ ಸುಮಾರು 250 ಕಿಲೋ ಮೀಟರ್‌ಗಳಷ್ಟು ವಿಸ್ತಾರದಲ್ಲಿ ಸ್ಥಾಪಿಸಲಾಗಿದೆ. ಬೇಲಿಗಳ ಸ್ಥಾಪನೆಯ ನಂತರ ಯಾವುದೇ ಜಾನುವಾರಗಳ ಸಾವು ಸಂಭವಿಸಿಲ್ಲ.
ರೈಲ್ವೆಯ ಬಜೆಟ್ ಅನ್ನು ಪ್ರಸ್ತುತ 1 ಲಕ್ಷ ಕೋಟಿ ರೂ.ಯಿಂದ 2.4 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ರೈಲ್ವೆಯ ಸಾಮರ್ಥ್ಯದ ಆಧಾರದ ಮೇಲೆ ಯೋಜನೆಗಳ ಬಜೆಟ್ ಹೆಚ್ಚುತ್ತಿದೆ. ರೈಲು ಪ್ರಯಾಣಿಕರಿಗೆ 4G-5G ಸೇವೆಗಳನ್ನು ಒದಗಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ರೈಲ್ವೆಯಿಂದ 4G-5G ಟವರ್‌ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಇದನ್ನೂ ಓದಿ: ಡೆಹ್ರಾಡೂನ್ - ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ