ಗುವಾಹಟಿ: ಅಸ್ಸೋಂನ ಹಣಕಾಸು ಸಚಿವ ಹಿಮಂತ ಬಿಸ್ವಾ ಶರ್ಮಾ ಅವರ ಕೊಲೆಗೆ ಸಂಚು ರೂಪಿಸಲಾಗಿದೆ ಎಂಬ ಆರೋಪದ ಹಿನ್ನೆಲೆ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸೋಂ (ಉಲ್ಫಾ)ನ ಮೂವರು ಸದಸ್ಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಉಲ್ಫಾ (ಮಾತುಕತೆ ಪರವಾಗಿರುವ ಗುಂಪು) ಉಗ್ರರ ಗುಂಪು ಕೆಲವು ಅಪರಿಚಿತ ಸದಸ್ಯರೊಂದಿಗೆ ಅಸ್ಸೋಂನ ಹಣಕಾಸು ಸಚಿವ ಹಿಮಂತ ಬಿಸ್ವಾ ಶರ್ಮಾ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿರುವುದಾಗಿ ವಿಶ್ವಾಸಾರ್ಹ ಮೂಲದಿಂದ ರಹಸ್ಯ ಮಾಹಿತಿ ನೀಡಲಾಗಿದೆ ಎಂದು ಅಸ್ಸೋಂ ಪೊಲೀಸರ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಮೂವರಲ್ಲಿ ಬಂಡಾಯ ಸಂಘಟನೆಯ ಉಪಾಧ್ಯಕ್ಷ ಪ್ರದೀಪ್ ಗೊಗೊಯ್ ಕೂಡ ಸೇರಿದ್ದಾರೆ. ಈ ಮೂವರನ್ನು ಮಂಗಳವಾರ ವಿಚಾರಣೆಗಾಗಿ ನಗರ ನ್ಯಾಯಾಲಯದಲ್ಲಿ ಹಾಜರುಪಡಿಸಿ ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾರ್ಚ್ 27 ರಂದು ರಾಜ್ಯದಲ್ಲಿ ಮೂರು ಹಂತದ ವಿಧಾನಸಭಾ ಚುನಾವಣೆ ಪ್ರಾರಂಭವಾಗಲಿದ್ದು, ಈ ಮುನ್ನ ಈ ರೀತಿಯ ಬೆಳವಣಿಗೆಗಳು ನಡೆಯುತ್ತಿವೆ.