ವಡೋದರಾ (ಗುಜರಾತ್): ತಮ್ಮವರು ಕೊರೊನಾ ಸೋಂಕಿಗೆ ಬಲಿಯಾದ ನೋವಿನಲ್ಲೂ ನರ್ಸ್ಗಳು ರೋಗಿಗಳ ಸೇವೆಯೇ ಮುಖ್ಯವೆಂದು ಕರ್ತವ್ಯಕ್ಕೆ ಮರಳಿದ್ದಾರೆ.
ಗುಜರಾತ್ನ ವಡೋದರಾ ಜಿಲ್ಲೆಯ ಸರ್ ಸಯಾಜಿರಾವ್ ಜನರಲ್ ಆಸ್ಪತ್ರೆ (ಎಸ್ಎಸ್ಜಿ)ಯಲ್ಲಿ ಮೂವರು ನರ್ಸ್ಗಳು ತಮ್ಮ ಪತಿ, ತಂದೆ ಮತ್ತು ತಾಯಿಯ ಮರಣದ ನಂತರ ಅವರ ಅಂತ್ಯಕ್ರಿಯೆಯನ್ನು ಪೂರ್ಣಗೊಳಿಸಿ ತಕ್ಷಣವೇ ಆಸ್ಪತ್ರೆಗೆ ಬಂದು ರೋಗಿಗಳ ಸೇವೆಯಲ್ಲಿ ತೊಡಗಿದ್ದಾರೆ.
ಎಸ್ಎಸ್ಜಿ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಪಾರುಲ್ ಬೆನ್ ಅವರ ಪತಿ ನವೆಂಬರ್ 12ರಂದು ಕೊರೊನಾ ತಗುಲಿ ಮೃತಪಟ್ಟಿದ್ದರು. ಪತಿಯ ಅಂತ್ಯಕ್ರಿಯೆ ನಡೆಸಿ, ಕೊರಗುತ್ತಾ ಮನೆಯಲ್ಲಿ ಕೂರದೇ ಇತ್ತ ತಮ್ಮ ಕೆಲಸದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಇತರ ರೋಗಿಗಳಿಗೆ ಚಿಕಿತ್ಸೆ ನೀಡುವುದು ನಮ್ಮ ಸಂಬಂಧಿಕರಿಗೆ ಚಿಕಿತ್ಸೆ ನೀಡಿದಂತೆ ತೃಪ್ತಿ ನೀಡಿತು ಎನ್ನುತ್ತಾರೆ ಪಾರುಲ್.
ಮಗಳ ಕಣ್ಮುಂದೆಯೇ ಜೀವ ಬಿಟ್ಟಿದ್ದ ತಂದೆ:
ಫಾಲ್ಗುಣಿ ಬೆನ್ ಗೋಹಿಲ್ ಎಂಬ ನರ್ಸ್ ತಂದೆ ಸೋಂಕಿಗೆ ಒಳಗಾಗಿ ಮಗಳು ಕೆಲಸ ಮಾಡುತ್ತಿದ್ದ ಎಸ್ಎಸ್ಜಿ ಆಸ್ಪತ್ರೆಯಲ್ಲೇ ದಾಖಲಾಗಿದ್ದರು. ಮಗಳ ಕಣ್ಮುಂದೆಯೇ ಕೊನೆಯುಸಿರೆಳೆದಿದ್ದರು. ಕೋವಿಡ್ ಮಾರ್ಗಸೂಚಿಗಳಂತೆ ಅಪ್ಪನ ಅಂತಿಮ ವಿಧಿ ವಿಧಾನ ಮುಗಿಸಿದ ಫಾಲ್ಗುಣಿ, ಇತರ ರೋಗಿಗಳ ಸೇವೆ ಮಾಡುತ್ತಾ ತೃಪ್ತಿ ಹೊಂದುವೆ ಎಂದು ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ನರ್ಸ್ ಪಾರುಲ್ ಬೆನ್ ಪರೇಖ್ ಅವರ ತಾಯಿ ಕೂಡ ಮಹಾಮಾರಿಗೆ ಬಲಿಯಾಗಿದ್ದು, ಕೋವಿಡ್ ವಾರ್ಡ್‌ನಲ್ಲಿ ಮಾನವ ಸೇವೆಯೇ ದೇವರ ಸೇವೆಯೆಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.