ಆಲ್ವಾರ್ (ರಾಜಸ್ಥಾನ): ವರನು ಇದ್ದಕ್ಕಿದ್ದಂತೆ 3 ಲಕ್ಷ ರೂಪಾಯಿ ವರದಕ್ಷಿಣೆ ಮತ್ತು ಬುಲೆಟ್ ಬೈಕ್ ಬೇಡಿಕೆ ಇಟ್ಟ ಪರಿಣಾಮ ಮದುವೆ ಮುರಿದು ಬಿದ್ದು, ವಧು ಇಲ್ಲದೆ ಮದುವೆಗೆ ಬಂದ ಮೆರವಣಿಗೆ ಹಿಂತಿರುಗಿರುವ ಘಟನೆ ಅಲ್ವಾರ್ ಜಿಲ್ಲೆಯ ಗೋವಿಂದಗಢ ಪೊಲೀಸ್ ಠಾಣೆ ವ್ಯಾಪ್ತಿಯ ಟಿಕ್ರಿ ಗ್ರಾಮದಲ್ಲಿ ಜರುಗಿದೆ.
ವಧುವಿನ ತಂದೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇದರ ಕುರಿತಾಗಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮದುವೆ ಮುಂಚೆ ವರನ ಕಡೆಯುವರು ವರದಕ್ಷಿಣೆ ನಿಗದಿಪಡಿಸಿರಲಿಲ್ಲ. ಅವರ ಬೇಡಿಕೆಯ ಪ್ರಕಾರ, ಮದುವೆಯಲ್ಲಿ ಎಲ್ಲ ಸರಕು ಸಾಮಾನುಗಳನ್ನು ನೀಡಲಾಯಿತು. ಆದರೆ ಮದುವೆಯ ಸಮಯದಲ್ಲಿ ವರನು ಇದ್ದಕ್ಕಿದ್ದಂತೆ 3 ಲಕ್ಷ ರೂಪಾಯಿ ಹಾಗೂ ಬುಲೆಟ್ ಮೋಟಾರ್ ಬೈಕ್ಗೆ ಬೇಡಿಕೆಯಿಟ್ಟರು ಎಂದು ವಧುವಿನ ತಂದೆ ಆರೋಪಿಸಿದ್ದಾರೆ.
ಛಾಪ್ರಾ ಪೊಲೀಸ್ ಠಾಣೆ ಗೋಪಾಲಗಢ ನಿವಾಸಿ ಮುಬೀನ್ ಪುತ್ರ ಮತ್ತು ಫಜ್ರು ಖಾನ್ ಮಗಳ ಮದುವೆ ಮುಸ್ಲಿಂ ಪದ್ಧತಿಯಂತೆ ಮೇ 21 ರಂದು ನಿಗದಿಪಡಿಸಲಾಯಿತು. ಮದುವೆ ಮೆರವಣಿಗೆ 21ರಂದು ಮನೆಗೆ ಆಗಮಿಸಿತು. ವರನ ಕಡೆಯವರಿಗೆ ಉಟೋಪಚಾರ ವ್ಯವಸ್ಥೆಯೂ ಆಯಿತು. ನಂತರ ನಿಕಾಹ್ ಓದುತ್ತಿದ್ದಾಗ ವರನ ಕಡೆಯವರು 3 ಲಕ್ಷ ನಗದು ಹಾಗೂ ಬುಲೆಟ್ ಮೋಟಾರ್ ಬೈಕ್ ನೀಡುವಂತೆ ಬೇಡಿಕೆ ಇಟ್ಟರು. ಮದುವೆ ಫಿಕ್ಸ್ ಮಾಡುವ ಮುನ್ನ ಯಾವುದೇ ಬೇಡಿಕೆ ಇರಲಿಲ್ಲ ಎಂದು ವಧುವಿನ ಕುಟುಂಬದವರು ವಿರೋಧಿಸಿದರು.
ಎರಡೂ ಕುಟುಂಬಗಳ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಆಗ ಹುಡುಗಿಯವರ ಕಡೆಯವರು ವರದಕ್ಷಿಣೆ ಬೇಡಿಕೆಗೆ ಒಪ್ಪಲಿಲ್ಲ. ಇದರಿಂದ ವಧು ಇಲ್ಲದೇ ವರನ ಮೆರವಣಿಗೆ ವಾಪಸ್ ತೆರಳಲು ಮುಂದಾಗಿತ್ತು. ವರನ ಕಡೆಯವರು ಮದುವೆಗೆ ನಿರಾಕರಿಸಿದ ವಿಷಯ ತಿಳಿದ ತಕ್ಷಣ ಗ್ರಾಮಸ್ಥರು ಕೋಪಗೊಂಡು ಇಡೀ ಮೆರವಣಿಗೆಯನ್ನು ಕೊಠಡಿಗೆ ಹಾಕಿ ಪಂಚರು ನಿರ್ಧಾರ ಪ್ರಕಟಿಸುವವರೆಗೂ ಬಿಡಲಿಲ್ಲ. ಇದಾದ ನಂತರ ಒಂದು ಸುತ್ತಿನ ಮಾತುಕತೆ ನಡೆದ ಬಳಿಕ ವಧು ಇಲ್ಲದೆ ಮೆರವಣಿಗೆ ಮರಳಿತು.
ಶಿಕ್ಷೆಗೆ ಆಗ್ರಹ: ವರದಕ್ಷಿಣೆ ಕೇಳುವ ಹುಡುಗ ಹಾಗೂ ಆತನ ಕುಟುಂಬ ಸದಸ್ಯರಿಗೆ ಜೈಲು ಶಿಕ್ಷೆ ವಿಧಿಸಬೇಕು ಎಂದು ವಧುವಿನ ತಂದೆ ಫಜ್ರು ಖಾನ್ ಒತ್ತಾಯಿಸಿದ್ದಾರೆ. ನಿಕಾಹ್ ಸಮಯದಲ್ಲಿ, ಬೈಕ್ ಮತ್ತು ಹೆಚ್ಚಿನ ಹಣವನ್ನು ಕೇಳಲಾಯಿತು. ಆದರೆ ಈ ಹಿಂದೆ ಏನನ್ನೂ ನಿರ್ಧರಿಸಲಾಗಿಲ್ಲ. ವರನ ಕಡೆಯವರು ನಮಗೆ ಅವಮಾನ ಮಾಡಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ತಿಳಿಸಿದ್ದಾರೆ.
ವರನ ಕಡೆಯವರು ಮದುವೆ ಸಮಾರಂಭದಲ್ಲಿ ವರದಕ್ಷಿಣೆಗೆ ಒತ್ತಾಯಿಸಿರುವ ಕುರಿತಾಗಿ ವಧುವಿನ ಕಡೆಯ ಜನರಿಂದ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಅದೇ ಸಂದರ್ಭದಲ್ಲಿ ಹುಡುಗರ ಕಡೆಯ ಜನರನ್ನು ಕರೆಯಿಸಲಾಗಿದ್ದು, ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಶರ್ಮಾ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಅಪಾರ್ಟ್‌ಮೆಂಟ್‌ನಲ್ಲಿ ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಮೂರನೇ ಮಹಡಿಯಿಂದ ಬಿದ್ದ ಡೆಲಿವರಿ ಏಜೆಂಟ್