ಜೈಪುರ(ರಾಜಸ್ಥಾನ): ಸ್ಲೀಪರ್ ಬಸ್ವೊಂದು ಹೈಟೆನ್ಷನ್ ವಿದ್ಯುತ್ ತಂತಿಗೆ ಸ್ಪರ್ಶಿದ ಪರಿಣಾಮ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಮೂವರು ಪ್ರಯಾಣಿಕರು ಮೃತಪಟ್ಟು 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಾಜಧಾನಿ ಜೈಪುರದ ಚಂದ್ವಾಜಿ ಪೊಲೀಸ್ ಠಾಣಾ ವ್ಯಾಪ್ತಿಯ ದೆಹಲಿ ಹೆದ್ದಾರಿಯಲ್ಲಿ ಈ ದುರ್ಘಟನೆ ನಡೆದಿದೆ. ಬೆಂಕಿ ಕಾಣಿಸಿಕೊಂಡಿದ್ದರಿಂದ ಬಸ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಹಠಾತ್ ಬೆಂಕಿ ಕಾಣಿಸಿಕೊಂಡಿದ್ದರಿಂದ ಪ್ರಯಾಣಿಕರು ಗಾಬರಿಯಾಗೀಡಾಗಿ ಓಡಾಡಿದ್ದಾರೆ.
ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್‌ನಿಂದ ಸುಟ್ಟು ಕರಕಲಾದ ಚಹಾ ಅಂಗಡಿ: ವಿಡಿಯೋ
ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಚಾಲಕ ಹಾಗೂ ಆಪರೇಟರ್ ಮೊದಲು ಬಸ್‌ನಿಂದ ಹಾರಿ ಜೀವ ಉಳಿಸಿಕೊಂಡಿದ್ದಾರೆ. ಅವಘಡದಿಂದ ಗಾಬರಿಯಾಗೀಡಾದ ಪ್ರಯಾಣಿಕರು ಸಹ ಬಸ್‌ನಿಂದ ಹಾರಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಬೆಂಕಿಯಿಂದ ತಪ್ಪಿಸಿಕೊಳ್ಳಲಾರದ ಮೂವರು ಪ್ರಯಾಣಿಕರು ಮೃತಪ್ಟಿದ್ದಾರೆ. ಒಂದು ಡಜನ್ಗಿಂತ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಚಾಂಡ್ವಾಜಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಚಾಂಡ್ವಾಜಿ ಪೊಲೀಸ್ ಠಾಣೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸ ಪಡಬೇಕಾಯಿತು. ಸ್ಥಳೀಯರ ಸಹಾಯದಿಂದ ಪೊಲೀಸರು ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ. ಆದರೆ, ಬಸ್‌ನಲ್ಲಿದ್ದ ಪ್ರಯಾಣಿಕರ ಸರಕುಗಳು ಬಸ್ ಸಮೇತ ಸುಟ್ಟು ಬೂದಿಯಾಗಿವೆ.
ಮೇಲೆ ಹಾದು ಹೋಗಿದ್ದ ಹೈ-ಟೆನ್ಷನ್ ವಿದ್ಯುತ್ ತಂತಿ ಬಸ್ಗೆ ತಾಗಿದ್ದರಿಂದ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಸ್ತೆ ಮೇಲೆ ಸುಮಾರು 5 ಅಡಿಗಳಷ್ಟು ಮಣ್ಣು ಹಾಕಿದ್ದರಿಂದ 15 ಅಡಿ ಎತ್ತರದಲ್ಲಿದ್ದ ವಿದ್ಯುತ್ ತಂತಿಗೆ ಬಸ್ ಸ್ಪರ್ಶಿಸಿದೆ ಎನ್ನಲಾಗುತ್ತಿದೆ. ಗಾಯಾಳುಗಳಲ್ಲಿ 6 ಜನರ ಸ್ಥಿತಿ ಗಂಭೀರವಾಗಿದೆ. ಇನ್ನು ರಸ್ತೆಗೆ ಮಣ್ಣು ಹಾಕಿ ಎತ್ತರ ಮಾಡಿದವರ ವಿರುದ್ಧ ನೋಟಿಸ್ ನೀಡುವ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರಾಣ ಪಣಕ್ಕಿಟ್ಟು ವಿದ್ಯುತ್ ತಂತಿ & ಹಗ್ಗದ ಸಹಾಯದಿಂದ ನದಿ ದಾಟುವ ಗ್ರಾಮಸ್ಥರು!
ವಿದ್ಯುತ್ ಇಲಾಖೆಯಿಂದ ಯಾವುದೇ ದೋಷವಿಲ್ಲ. ಬಸ್ ಚಾಲಕ ಮತ್ತು ಹೋಟೆಲ್ ಮಾಲೀಕರ ನಿರ್ಲಕ್ಷ್ಯದಿಂದಾಗಿ ಈ ಅಪಘಾತ ಸಂಭವಿಸಿದೆ. 11000 ಕೆವಿ ಹೈಟೆನ್ಷನ್ ಲೈನ್ಗೆ ಸ್ಪರ್ಶ ಮಾಡಿದ್ದರಿಂದ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಈ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಜೈಪುರ ಗ್ರಾಮೀಣ ಪೊಲೀಸ್ ಠಾಣೆಯ ಎಸ್‌ಪಿ ಶಂಕರ್ ದತ್ ಶರ್ಮಾ ತಿಳಿಸಿದ್ದಾರೆ. ಬಸ್ ದೆಹಲಿಯಿಂದ ಜೈಪುರದತ್ತ ಬರುತ್ತಿತ್ತು.