ನೋಯ್ಡಾ: ಧಾರ್ಮಿಕ ಮೆರವಣಿಗೆಯ ವೇಳೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಮೂವರನ್ನು ನೋಯ್ಡಾದಲ್ಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಈದ್-ಮಿಲಾದ್-ಉನ್-ನಬಿ ಆಚರಣೆ ವೇಳೆ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾಕ್ ಪರ ಘೋಷಣೆ ಕೂಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ದುಷ್ಕರ್ಮಿಗಳನ್ನು ಅರೆಸ್ಟ್ ಮಾಡಿದ್ದಾರೆ.
'ನೋಯ್ಡಾದ ಸೆಕ್ಟರ್ 20 ರ ಪೊಲೀಸ್ ಸ್ಟೇಷನ್ ಪ್ರದೇಶದಲ್ಲಿ ಧಾರ್ಮಿಕ ಮೆರವಣಿಗೆ ನಡೆಸಲಾಗಿದೆ. ಈ ಸಂದರ್ಭದಲ್ಲಿ 'ಪಾಕಿಸ್ತಾನ ಜಿಂದಾಬಾದ್' ಎಂದು ಕೂಗಿರುವುದು ವೈರಲ್ ಆಗಿರುವ ವಿಡಿಯೋದಲ್ಲಿದೆ. ಈ ವಿಡಿಯೋದ ಸತ್ಯಾಸತ್ಯತೆಯನ್ನು ತಜ್ಞರು ಪರಿಶೀಲಿಸಿದ್ದು, ಘೋಷಣೆ ಕೂಗಿರುವುದು ಸಾಬೀತಾದ ನಂತರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ' ಎಂದು ನೊಯ್ಡಾದ ಉಪ ಪೊಲೀಸ್ ಆಯುಕ್ತ ರಾಜೇಶ್.ಎಸ್ ತಿಳಿಸಿದರು.
ಈ ವಿಡಿಯೋವನ್ನು ಪೂರ್ಣವಾಗಿ ಕೂಲಂಕಷವಾಗಿ ಗಮನಿಸಿದರೆ ಅದರಲ್ಲಿ ಹಿಂದೂಸ್ತಾನ್ ಜಿಂದಾಬಾದ್ ಎಂದು ಕೂಗಿರುವುದೂ ಕೂಡಾ ಕೇಳಿಸುತ್ತದೆ. ಆದರೆ, ಇದರ ಮಧ್ಯೆ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿರುವುದು ಕಂಡು ಬರುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು.
ಹೀಗಾಗಿ, ಸೆಕ್ಟರ್ 20 ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 153 A (ಸಮುದಾಯಗಳ ಮಧ್ಯೆ ವೈರತ್ವ ಮೂಡಿಸುವುದು ಹಾಗು ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುವುದು) ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಪ್ರಕರಣದಲ್ಲಿ ಮಹಮ್ಮದ್ ಜಾಫರ್, ಸಮಿರ್ ಅಲಿ ಹಾಗು ಅಲಿ ರಾಝಾ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.