ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಕೇಂದ್ರದ ಪ್ರಮುಖ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಡಿ ಬಡ ಮತ್ತು ಗ್ರಾಮೀಣ ಕುಟುಂಬಗಳ ಮೂರು ಕೋಟಿ ಮಹಿಳೆಯರನ್ನು ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗ ಆಚರಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈ ರೋಗದ ವಿರುದ್ಧದ ಹೋರಾಟದಲ್ಲಿ ಮಹಿಳೆಯರು ಈಗ ಸರ್ಕಾರದ ಬೆಂಬಲವನ್ನು ಹೊಂದಿದ್ದಾರೆ ಎಂದು ಅವರು ತಿಳಿಸಿದರು.
ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿಭಾಯಿಸಲು ಸರ್ಕಾರ ಮಾಡಿದ ವಿವಿಧ ಪ್ರಯತ್ನಗಳನ್ನು ಸ್ಮೃತಿ ಇರಾನಿ ಶ್ಲಾಘಿಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರವು ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ 10 ಕೋಟಿ ಶೌಚಾಲಯಗಳನ್ನು ನಿರ್ಮಿಸಿದೆ. ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ ಯೋಜನೆಯಡಿ ಮಹಿಳೆಯರಿಗೆ 1 ರೂಪಾಯಿಗೆ ಸ್ಯಾನಿಟರಿ ಪ್ಯಾಡ್ಗಳನ್ನು ನೀಡಲಾಗುತ್ತಿದೆ ಎಂದರು.
"ಇಂದು ಪುರುಷರು ಕೂಡಾ ಮಹಿಳೆಯರ ಸುರಕ್ಷತೆ ಮತ್ತು ಆರೋಗ್ಯದ ಕುರಿತು ಮಾತನಾಡುತ್ತಿದ್ದು, ಇದು ನಾವೆಲ್ಲರೂ ಸಮಾನತೆಯತ್ತ ಕೆಲಸ ಮಾಡುತ್ತಿದ್ದೇವೆ ಎಂಬುದರ ಸೂಚನೆಯಾಗಿದೆ" ಎಂದು ಅವರು ಹೇಳಿದರು.
ಮಹಿಳಾ ಸಬಲೀಕರಣಕ್ಕಾಗಿ 'ಮಿಷನ್ ಶಕ್ತಿ' ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕೇಂದ್ರ ಕಾರ್ಯದರ್ಶಿ ರಾಮ್ ಮೋಹನ್ ಮಿಶ್ರಾ ಹೇಳಿದರು.