ಬಹ್ರೈಚ್ (ಉತ್ತರ ಪ್ರದೇಶ): ಮಾಂತ್ರಿಕನೊಬ್ಬ "ನರಬಲಿ" ಕೊಡುವಂತೆ ಕೇಳಿದ್ದಕ್ಕೆ 10 ವರ್ಷದ ಬಾಲಕನನ್ನು ಅಮಾನವೀಯವಾಗಿ ಕೊಂದು ಹಾಕಿದ ಗಂಭೀರ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ. ಬಲಿ ಹಾಕಲು ಸಹಕರಿಸಿದ ಮಾಂತ್ರಿಕ, ಅನೂಪ್, ಚಿಂತಾರಾಮ್ ಎಂಬ ಮೂವರನ್ನು ಪೊಲೀಸರು ಜೈಲಿಗಟ್ಟಿದ್ದಾರೆ.
ವಿವರ: "ಪರ್ಸಾ ಗ್ರಾಮದ ನಿವಾಸಿ ಕೃಷ್ಣ ವರ್ಮಾ ಎಂಬವರ ಪುತ್ರ ವಿವೇಕ್ ಗುರುವಾರ ರಾತ್ರಿ ನಾಪತ್ತೆಯಾಗಿದ್ದ. ಈ ಕುರಿತು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಅದೇ ದಿನ ರಾತ್ರಿ ಗದ್ದೆಯಲ್ಲಿ ಮಗುವಿನ ಕತ್ತು ಸೀಳಿದ ಶವ ಪತ್ತೆಯಾಗಿತ್ತು. ಮೃತ ಮಗುವಿನ ಸೋದರ ಸಂಬಂಧಿ ಅನೂಪ್‌ಗೆ ಎರಡೂವರೆ ವರ್ಷದ ಮಗನಿದ್ದು, ಆತ ಮಾನಸಿಕವಾಗಿ ಅಸ್ವಸ್ಥನಾಗಿದ್ದ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಗುಣಮುಖನಾಗಲಿಲ್ಲ. ಬಳಿಕ ಹಳ್ಳಿಯ ಸಮೀಪವಿರುವ ಮಾಂತ್ರಕನೊಬ್ಬರನ್ನು ಸಂಪರ್ಕಿಸಿದಾಗ ಆತ ನರಬಲಿ ನೀಡಲು ಪ್ರಚೋದನೆ ನೀಡಿದ್ದಾನೆ. ಇದಕ್ಕೊಪ್ಪಿದ ವಿವೇಕ್‌ನ ಚಿಕ್ಕಪ್ಪ ಚಿಂತಾರಾಮ್ ಜೊತೆಗೂಡಿ ಗುದ್ದಲಿಯಿಂದ ಮಗುವನ್ನು ಕೊಂದಿದ್ದಾನೆ. ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದ್ದು ಕೊಲೆ ಪ್ರಕರಣ ದಾಖಲಿಸಲಾಗಿದೆ" ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ವರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ : ನಿಧಿಗಾಗಿ ರೈತನ ನರಬಲಿ: ಆರೋಪಿ ಬಾಯ್ಬಿಟ್ಟ ಭಯಾನಕ ಸ್ಟೋರಿ!
ನಿಧಿಗಾಗಿ ಕೊಲೆ: ನಿಧಿ ಆಸೆಗಾಗಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿಯಲ್ಲಿ ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ನಡೆದಿತ್ತು. ರೈತ ಲಕ್ಷ್ಮಣನ್ ಕೊಲೆಯಾದ ವ್ಯಕ್ತಿ. ಇವರು ತೆಂಕಣಿಕೋಟೈ ತಾಲೂಕಿನ ಕೆಳಮಂಗಲ ಸಮೀಪದ ಪುದೂರು ಗ್ರಾಮದವರು. 2022ರ ಸೆ.28ರಂದು ಲಕ್ಷ್ಮಣನ್ ಮನೆಯ ಸಮೀಪದ ಅಡಿಕೆ ತೋಟದಲ್ಲಿ ಶವ ನಿಗೂಢವಾಗಿ ಪತ್ತೆಯಾಗಿತ್ತು. ಜೊತೆಗೆ, ಆ ಸ್ಥಳದಲ್ಲಿಯೇ ವೀಳ್ಯದೆಲೆ, ನಿಂಬೆಹಣ್ಣು, ಅರಿಶಿನ, ಕುಂಕುಮ, ಕೋಳಿ, ಗುದ್ದಲಿ ಸೇರಿದಂತೆ ಪೂಜಾ ಸಾಮಗ್ರಿಗಳಿದ್ದವು. ಈ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ನಿಧಿಗಾಗಿ ಕೊಲೆ ಮಾಡಿರುವುದಾಗಿ ತಿಳಿದುಬಂದಿತ್ತು.
ಇದನ್ನೂ ಓದಿ : 'ನಿಧಿ'ಗಾಗಿ ಮುಗ್ಧ ಕೂಲಿ ಕಾರ್ಮಿಕ ಮಹಿಳೆಗೆ ಅವಮಾನ: ರಾಮನಗರದಲ್ಲಿ ಪೊಲೀಸರ ಮುಂದೆ 'ಬೆತ್ತಲಾದ' ಪೂಜಾರಿ!
ಕಳೆದ 2021ರ ಜೂನ್ ತಿಂಗಳಿನಲ್ಲಿ ಸಹ ಇಂತಹದೇ ಘಟನೆ ಬೆಳಕಿಗೆ ಬಂದಿತ್ತು. ಮನೆ ಮುಂದೆ ಆಟ ಆಡುತ್ತಿದ್ದ 10 ವರ್ಷದ ಬಾಲಕಿಯನ್ನು ಬಲವಂತವಾಗಿ ಕರೆದುಕೊಂಡು ಹೋಗಿ ವಾಮಾಚಾರ ಮಾಡಿ, ಬಲಿ ನೀಡಲು ನೆಲಮಂಗಲದಲ್ಲಿ ಯತ್ನಿಸಲಾಗಿತ್ತು. ಇಲ್ಲಿನ ಸೋಲದೇವನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಗಾಂಧಿ ಗ್ರಾಮದಲ್ಲಿ ದೇವರ ಪೂಜೆ ಹೆಸರಿನಲ್ಲಿ ಬಾಲಕಿಯ ಮೇಲೆ ವಾಮಾಚಾರ ಮಾಡಿ, ಬಲಿ ನೀಡಲು ಮುಂದಾಗಿದ್ದರು. ಬಾಲಕಿ ಕಾಣದಿದ್ದಾಗ ಕುಟುಂಬದವರು ಹುಡುಕಿದ್ದು, ಕೃತ್ಯ ಬಯಲಿಗೆ ಬಂದಿತ್ತು.
ನರಬಲಿ ಎಂದರೇನು?: ಬದುಕಿರುವ ಮನುಷ್ಯನನ್ನು ದೈವದ ನೆಪ ಹೇಳಿ ಯಾವುದಾದರೊಂದು ಕಾರಣದಿಂದ ಸಾಯಿಸುವ ಪ್ರಕ್ರಿಯೆ. ಇದು ಅಮಾನುಷ ಕೃತ್ಯವಾಗಿದ್ದು, ಮುಗ್ಧ ವ್ಯಕ್ತಿಯೊಬ್ಬನನ್ನು ಆಸೆ, ಆಕಾಂಕ್ಷೆ, ಭಕ್ತಿ-ಗೌರವ, ಸಂಪ್ರದಾಯ, ಆಚರಣೆಗಳ ಹೆಸರು ಹೇಳಿಕೊಂಡು ಬಲಿ ರೂಪದಲ್ಲಿ ಕೊಡುವುದಾಗಿದೆ. ಇದು ಕಾನೂನಿನಡಿ ಶಿಕ್ಷಾರ್ಹ ಅಪರಾಧ.
ಇದನ್ನೂ ಓದಿ : ಕೇರಳದಲ್ಲಿ ಮಾಟ ಮಂತ್ರ ಪ್ರಕರಣ: ತನ್ನನ್ನು ವಿರೋಧಿಸಿದರೆ 41 ದಿನದಲ್ಲಿ ಸಾಯಿಸುವುದಾಗಿ ಭಯ ಹುಟ್ಟಿಸಿದ್ದ ಮಹಿಳೆ