ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಇದೀಗ ಪುನಾರಚನೆಯಾಗಲಿದ್ದು, ಕೆಲವೊಂದು ಹೊಸ ಮುಖಗಳಿಗೆ ನಮೋ ತಂಡದಲ್ಲಿ ಕೆಲಸ ಮಾಡುವ ಅವಕಾಶ ಸಿಗುವುದು ಬಹುತೇಕ ಖಚಿತವಾಗಿದೆ. ಆದರೆ ಯಾರಿಗೆಲ್ಲ ಮಣೆ ಹಾಕಲಾಗುತ್ತದೆ ಎಂಬ ಗೊಂದಲಕ್ಕೆ ಮಾತ್ರ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಕ್ಯಾಬಿನೆಟ್ನಲ್ಲಿ 27 ಹೊಸ ಮುಖಗಳಲ್ಲಿ ಕೆಲವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಅದರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ, ಸುಶೀಲ್ ಮೋದಿ, ಸರ್ಬಾನಂದ್ ಸೋನೊವಾಲ್, ನಾರಾಯಣ್ ರಾಣೆ ಮತ್ತು ಬೋಪೇಂದರ್ ಯಾದವ್ ರೇಸ್ನಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಮುಂದಿನ ವರ್ಷ ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಗಮನದಲ್ಲಿಟ್ಟುಕೊಂಡು ನಮೋ ಸಂಪುಟ ಪುನಾರಚನೆ ಮಾಡಲು ನಿರ್ಧರಿಸಿದ್ದು, ಇದರಲ್ಲಿ ಕೈಲಾಸ್ ವಿಜಯ್ವರ್ಗೀಯಾ, ಬಿಜೆಪಿ ವಕ್ತಾರ ಸೈಯದ್ ಜಫಾರ್ ಇಸ್ಲಾಂ ಕೂಡ ಇದ್ದಾರೆ ಎನ್ನಲಾಗಿದೆ.
ಇದನ್ನೂ ಓದಿರಿ: ಅಯೋಧ್ಯಾ ರಾಮ ಮಂದಿರ ನಿರ್ಮಾಣ.. ರೂಪುರೇಷೆ ಸೇರಿ ಕಾರ್ಯಪ್ರಗತಿ ಪರಿಶೀಲಿಸಿದ ನಮೋ
ಕಳೆದ ಮಾರ್ಚ್ ತಿಂಗಳಲ್ಲಿ ಕಾಂಗ್ರೆಸ್ನಿಂದ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರಿಕೊಂಡಿದ್ದು, ಇದು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಗೆ ಬಹುದೊಡ್ಡ ಹೊಡೆತ ನೀಡಿದೆ. ಹೀಗಾಗಿ ಅವರಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಖಚಿತ ಎನ್ನಲಾಗುತ್ತಿದೆ.
ರೇಸ್ನಲ್ಲಿ ಯಾರೆಲ್ಲ?
- ಜ್ಯೋತಿರಾದಿತ್ಯ ಸಿಂಧಿಯಾ
- ಸುಶೀಲ್ ಮೋದಿ
- ಸರ್ಬಾನಂದ್ ಸೋನುವಾಲ್
- ನಾರಾಯಣ್ ರಾಣೆ
- ಭೂಪೇಂದ್ರ ಯಾದವ್
- ಕೈಲಾಸ್ ವಿಜಯ್ವರ್ಗೀಯಾ
- ಸೈಯದ್ ಜಫಾರ್ ಇಸ್ಲಾಂ
- ಸಂಸದ ಪ್ರೀತಮ್ ಮುಂಡೆ
- ಸ್ವತಂತ್ರದೇವ್ ಸಿಂಗ್
- ಪಂಕಜ್ ಚೌಧರಿ
- ವರುಣ್ ಗಾಂಧಿ
- ಅನಿಲ್ ಜೈನ್
- ಅಶ್ವಿನಿ ವೈಷ್ಣವ್
- ಬೈಜನಾಥ್ ಪಾಂಡೆ
- ದಿನೇಶ್ ತ್ರಿವೇದಿ
- ಸಂತೋಷ್ ಕುಮಾರ್
- ರಾಜ್ಯಸಭೆ ಸಂಸದ ರಾಜೀವ್ ಚಂದ್ರಶೇಖರ್
ರಾಮ್ವಿಲಾಸ್ ಪಾಸ್ವಾನ್, ಸುರೇಶ್ ಅಂಗಡಿ ನಿಧನದಿಂದ ಎರಡು ಸಚಿವ ಸ್ಥಾನಗಳು ಖಾಲಿಯಾಗಿದ್ದು, ಇದರ ಮಧ್ಯೆ ಕೆಲವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಯಾರಿಗೆ ಸಚಿವ ಸ್ಥಾನಕ್ಕೆ ಸೇರಿಸಿಕೊಳ್ಳಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿದಂತೆ ಅನೇಕರೊಂದಿಗೆ ಸಮಾಲೋಚನೆ ಸಹ ನಡೆಸಿದ್ದಾರೆ ಎನ್ನಲಾಗಿದೆ.