ಸಿಲಿಗುರಿ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ಸಿಎಂ ಮಮತಾ ಬ್ಯಾನರ್ಜಿ ಅವರ ಕನಸಿನ ಯೋಜನೆಯಾದ ಬೆಂಗಾಲ್ ಸಫಾರಿ ಪಾರ್ಕ್‌ನಲ್ಲಿ ಚುಕ್ಕೆ ಜಿಂಕೆಗಳು ಆಗಾಗ್ಗೆ ಸಾವನ್ನಪ್ಪುತ್ತಿವೆ. ಇದು ಈಗ ಕಳವಳಕ್ಕೂ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಜಿಂಕೆಗಳ ಸಾವಿನ ಬಗ್ಗೆ ಸಮಗ್ರ ತನಿಖೆಗೆ ಅರಣ್ಯ ಇಲಾಖೆ ಆದೇಶಿಸಿದೆ.
ಎರಡು ದಿನಗಳ ಹಿಂದೆ ಉತ್ತರ ಬಂಗಾಳದಲ್ಲಿ ವನ್ಯಜೀವಿ ಕಳ್ಳಸಾಗಾಣಿಕೆದಾರರ ಕಪಿಮುಷ್ಠಿಯಿಂದ ರಕ್ಷಿಸಲ್ಪಟ್ಟು ಬೆಂಗಾಲ್ ಸಫಾರಿ ಪಾರ್ಕ್‌ನಲ್ಲಿ ಆಶ್ರಯ ಪಡೆದಿದ್ದ ಆಸ್ಟ್ರೇಲಿಯಾದ ಕಾಂಗರೂ ಅಲೆಕ್ಸ್ ಎಂಬಾತ ವಿಷಾಹಾರ ಸೇವಿಸಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆಯೂ ತನಿಖೆ ನಡೆಸಲಿದೆ.
297 ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಬೆಂಗಾಲ್ ಸಫಾರಿ ಪಾರ್ಕ್‌ನಲ್ಲಿ ಕಳೆದ ಎರಡು ತಿಂಗಳಲ್ಲಿ 27 ಚುಕ್ಕೆ ಜಿಂಕೆಗಳು ಸಾವನ್ನಪ್ಪಿವೆ ಎಂದು ಅರಣ್ಯ ಇಲಾಖೆ ದಾಖಲೆಗಳು ಹೇಳುತ್ತಿವೆ. ಚುಕ್ಕೆ ಜಿಂಕೆಗಳು ಪದೇ ಪದೇ ಸಾಯುವ ಹಿಂದಿನ ಕಾರಣಗಳನ್ನು ಕಂಡುಹಿಡಿಯಲು ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಪಶ್ಚಿಮ ಬಂಗಾಳದ ಅರಣ್ಯ ಸಚಿವ ಜ್ಯೋತಿಪ್ರಿಯೋ ಮುಲ್ಲಿಕ್ ಹೇಳಿದ್ದಾರೆ.
ಅಷ್ಟೇ ಅಲ್ಲ ಚುಕ್ಕೆ ಜಿಂಕೆಗಳ ಸಾವನ್ನು ತಡೆಗಟ್ಟುವ ಕ್ರಮಗಳ ಬಗ್ಗೆಯೂ ಇಲಾಖೆ ತುಂಬಾ ಗಂಭೀರ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕರ್ತವ್ಯ ನಿರ್ಲಕ್ಷ್ಯ ಅಥವಾ ಕಾರ್ಯವಿಧಾನದ ಲೋಪಗಳನ್ನು ಪತ್ತೆಹಚ್ಚಲಾಗಿದೆ. ಹಿರಿಯ ಅಧಿಕಾರಿಗಳ ವರದಿ ಪ್ರಕಾರ ಕರ್ತವ್ಯ ಲೋಪ ಎಸೆಗಿದವರ ಮೇಲೆ ಶಿಸ್ತು ಕ್ರಮ ಪ್ರಾರಂಭಿಸಲಾಗುವುದು ಎಂದು ಬಂಗಾಳದ ಅರಣ್ಯ ಸಚಿವರು ಹೇಳಿದ್ದಾರೆ.
ಇದನ್ನು ಓದಿ:'ಮಗಳ ಕೊಂದ ಹಂತಕ ಅಫ್ತಾಬ್ನನ್ನು ಗಲ್ಲಿಗೇರಿಸಿ': ಶ್ರದ್ಧಾ ತಂದೆ ವಿಕಾಸ್ ವಾಲ್ಕರ್ ಆಗ್ರಹ