ಲಖನೌ(ಉತ್ತರ ಪ್ರದೇಶ): ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಕಣ ರಂಗೇರಿದೆ. ವಿವಿಧ ಪಕ್ಷದ ಅಭ್ಯರ್ಥಿಗಳು ಈಗಾಗಲೇ ಕಣಕ್ಕಿಳಿದು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ಯುಪಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಮಹದಾಸೆಯಿಂದ ಬಿಜೆಪಿ ಹಾಗೂ ಸಮಾಜವಾದಿ ಪಕ್ಷ ಸ್ಪರ್ಧೆಗೆ ಇಳಿದಿವೆ. ಇದೇ ಕಾರಣಕ್ಕಾಗಿ ಅಳೆದು ತೂಗಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗ್ತಿದೆ. ಇದೀಗ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ 25 ವರ್ಷದ ವಿದ್ಯಾರ್ಥಿನಿಯೋರ್ವರಿಗೆ ಮಣೆ ಹಾಕಿದ್ದಾರೆ.
ಉತ್ತರ ಪ್ರದೇಶದ ಲಖನೌ ಉತ್ತರ ವಿಧಾನಸಭಾ ಕ್ಷೇತ್ರದಿಂದ 25 ವರ್ಷದ ವಿದ್ಯಾರ್ಥಿನಿ ಪೂಜಾ ಶುಕ್ಲಾಗೆ ಮಣೆ ಹಾಕಿರುವ ಸಮಾಜವಾದಿ ಪಕ್ಷ, 2022ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಟಿಕೆಟ್ ನೀಡಿದೆ.
ಇದನ್ನೂ ಓದಿರಿ: 'ಭಾರತದಲ್ಲಿ ಬದಲಾವಣೆ ತರಲು ಹೊಸ ಸಂವಿಧಾನ ಬರೆಯಬೇಕು'.. ತೆಲಂಗಾಣ ಸಿಎಂ ಕೆಸಿಆರ್ ವಿವಾದಿತ ಹೇಳಿಕೆ
ಯಾರಿದು ಪೂಜಾ ಶುಕ್ಲಾ?: 'ಹಿಂದಿ ಸ್ವರಾಜ್ ದಿವಸ್' ಅಂಗವಾಗಿ 2017ರಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಲಖನೌ ವಿಶ್ವವಿದ್ಯಾಲಯಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಸಮಾಜವಾದಿ ಪಕ್ಷದೊಂದಿಗೆ ಇತರೆ ವಿದ್ಯಾರ್ಥಿಗಳ ಗುಂಪು ರಸ್ತೆಯಲ್ಲಿ ಪ್ರತಿಭಟನೆ ನಡೆಸಿತ್ತು.
ವಿದ್ಯಾರ್ಥಿನಿ ಪೂಜಾ ಶುಕ್ಲಾ ಸಹ ಇದರಲ್ಲಿ ಸೇರಿಕೊಂಡಿದ್ದರು. ಇದೇ ಕಾರಣಕ್ಕಾಗಿ ಲಖನೌ ವಿಶ್ವವಿದ್ಯಾಲಯದಿಂದ ಅಮಾನತುಗೊಂಡಿದ್ದ 8 ವಿದ್ಯಾರ್ಥಿಗಳ ಪಟ್ಟಿಯಲ್ಲಿ ಪೂಜಾ ಶುಕ್ಲಾ ಕೂಡ ಇದ್ದರು. ಜೊತೆಗೆ 20 ದಿನಗಳ ಕಾಲ ಜೈಲುವಾಸ ಅನುಭವಿಸಿದರು. ಈ ಘಟನೆ ನಡೆದ ಬಳಿಕ ಹೆಚ್ಚು ಫೇಮಸ್ ಆಗಿದ್ದ ಪೂಜಾಗೆ ಇದೀಗ ಅಖಿಲೇಶ್ ಯಾದವ್ ಪಕ್ಷ ಮಣೆ ಹಾಕಿದೆ.
403 ಕ್ಷೇತ್ರಗಳ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಒಟ್ಟು 7 ಹಂತಗಳಲ್ಲಿ ನಡೆಯಲಿದ್ದು, ಮೊದಲನೇ ಹಂತ ಫೆ.10ರಂದು ನಡೆಯಲಿದೆ. ಎಲ್ಲ ಕ್ಷೇತ್ರಗಳ ಫಲಿತಾಂಶ ಮಾರ್ಚ್ 10ರಂದು ಬಹಿರಂಗಗೊಳ್ಳಲಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ