ಗುವಾಹಟಿ: ಅಸ್ಸಾಂನಲ್ಲಿ ಅಂದಾಜು 25,073 ಜನ ಎಚ್‌ಐವಿ ಏಡ್ಸ್ (HIV) (PLHIV) ಪೀಡಿತರಾಗಿದ್ದಾರೆ ಎಂದು ಅಸ್ಸಾಂ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ (ASACS) ಹೇಳಿದೆ. 25,073 ಏಡ್ಸ್ ರೋಗಿಗಳ ಪೈಕಿ ಶೇ 45 ರಷ್ಟು ಮಹಿಳೆಯರು ಮತ್ತು ಶೇಕಡಾ 3 ರಷ್ಟು ಮಕ್ಕಳಿದ್ದಾರೆ ಎಂದು ಅದು ಹೇಳಿದೆ.
ಅಸ್ಸಾಂನಲ್ಲಿ ಎಚ್‌ಐವಿ ಹರಡುವಿಕೆಯ ಪ್ರಮಾಣವು ಶೇ 0.09 ರಷ್ಟಿದೆ. ಇದು ರಾಷ್ಟ್ರೀಯ ಹರಡುವಿಕೆಯ ಪ್ರಮಾಣ ಶೇ 0.21 ಕ್ಕಿಂತ ಕಡಿಮೆಯಾಗಿದೆ ಎಂದು ಎಎಸ್‌ಎಸಿಎಸ್ ಗುರುವಾರ ವಿಶ್ವ ಏಡ್ಸ್ ದಿನದ ಸಂದರ್ಭದಲ್ಲಿ NACO HIV ಅಂದಾಜು ವರದಿ 2021 ಅನ್ನು ಉಲ್ಲೇಖಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಆಂಟಿರೆಟ್ರೋವೈರಲ್ ಥೆರಪಿ (ART) ತೆಗೆದುಕೊಳ್ಳುವ ಮೂಲಕ ಬದುಕುತ್ತಿರುವ ಒಟ್ಟು ಜನರ ಸಂಖ್ಯೆ ರಾಜ್ಯದಲ್ಲಿ 10,765 ಆಗಿದೆ. ಕಾಮರೂಪ್ (ಮೆಟ್ರೋಪಾಲಿಟನ್) ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 7,610 ಪ್ರಕರಣಗಳು, ಕ್ಯಾಚಾರ್ 5,200, ನಾಗಾನ್ 16,02 ಮತ್ತು ದಿಬ್ರುಗಢ್ 1,402 ಪ್ರಕರಣಗಳು ವರದಿಯಾಗಿವೆ.
ಅಸ್ಸಾಂನಲ್ಲಿ ಎಚ್‌ಐವಿ ಸೋಂಕು ಹರಡುವ ವಿವಿಧ ಮಾರ್ಗಗಳ ಪ್ರಮಾಣ: ಶೇ 81.63 ರಷ್ಟು ಭಿನ್ನಲಿಂಗೀಯರ ನಡುವಿನ ಲೈಂಗಿಕತೆಯ ಮೂಲಕ, ಶೇ 5.54 ರಷ್ಟು ಎಚ್‌ಐವಿ- ಸೋಂಕಿತ ಸಿರಿಂಜ್ ಮತ್ತು ಸೂಜಿಗಳ ಮೂಲಕ, ಪೋಷಕರಿಂದ ಮಗುವಿಗೆ ಶೇ 4.76 ರಷ್ಟು, ಸಲಿಂಗಕಾಮಿ ಮಾರ್ಗದಿಂದ ಶೇ 4.61,ಶೇ 0.85 ರಷ್ಟು ರಕ್ತ ವರ್ಗಾವಣೆಯ ಮೂಲಕ ಮತ್ತು ಶೇ 2.61 ನಿರ್ದಿಷ್ಟವಾಗಿ ತಿಳಿಯದಿರುವುದು.
ಸಮೂಹ ಮಾಧ್ಯಮ (ಮುದ್ರಣ ಮತ್ತು ವಿದ್ಯುನ್ಮಾನ), ಹೊರಾಂಗಣ ಮಾಧ್ಯಮ (ಹೋರ್ಡಿಂಗ್ಸ್, ಬಸ್ ಮತ್ತು ರೈಲು ಪ್ಯಾನೆಲಿಂಗ್), ಜಾನಪದ ಮಾಧ್ಯಮ, ಸಾಮಾಜಿಕ ಮಾಧ್ಯಮ (ಫೇಸ್ಬುಕ್, ಟ್ವಿಟರ್, ಇನ್ಸ್ಟಾ), ಹಬ್ಬಗಳ ಸಮಯದಲ್ಲಿ ಚಟುವಟಿಕೆಗಳು, ಕಾರ್ಯಕ್ರಮಗಳಲ್ಲಿ ಎಚ್‌ಐವಿ ಸಂದೇಶಗಳನ್ನು ಹರಡುವ ಮೂಲಕ ಜಾಗೃತಿ ಮೂಡಿಸಲು ವಿವಿಧ ಚಟುವಟಿಕೆಗಳನ್ನು ಅಸ್ಸಾಂ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಕೈಗೊಂಡಿದೆ. ರೆಡ್ ರಿಬ್ಬನ್ ಕ್ಲಬ್‌ಗಳು ಮತ್ತು ಶಾಲೆಗಳಲ್ಲಿ ಹದಿಹರೆಯದ ಶಿಕ್ಷಣ ಕಾರ್ಯಕ್ರಮದ ಮೂಲಕ ಕಾಲೇಜುಗಳಲ್ಲಿ ಎಚ್‌ಐವಿ ಜಾಗೃತಿ ಮೂಡಿಸಲಾಗುತ್ತಿದೆ.
ಇದನ್ನೂ ಓದಿ: ಬಾಯ್ಫ್ರೆಂಡ್ಗೆ ಏಡ್ಸ್ ಇದೆ ಎಂದು ತನ್ನ ದೇಹದೊಳಗೂ HIV ಸೇರಿಸಿಕೊಂಡ ಗೆಳತಿ!