ನವದೆಹಲಿ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಕಟ್ಟಿಹಾಕಲು ಕಾಂಗ್ರೆಸ್, ಟಿಎಂಸಿ, ಆಪ್ ಸೇರಿದಂತೆ 20ಕ್ಕೂ ಅಧಿಕ ವಿಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸುತ್ತಿವೆ. ಇದರ ಭಾಗವಾಗಿ ಬಿಹಾರದ ಪಾಟ್ನಾದಲ್ಲಿ 17 ಪಕ್ಷಗಳು ಮೊದಲ ಸಭೆ ನಡೆಸಿದ್ದವು. ಈಗ 2ನೇ ಸಭೆ ಬೆಂಗಳೂರಿನಲ್ಲಿ ಜುಲೈ 17 ಮತ್ತು 18 ರಂದು ಕರೆಯಲಾಗಿದ್ದು, ಎನ್‌ಡಿಎ ಭಾಗವಾಗಿದ್ದ ಕೆಡಿಎಂಕೆ ಮತ್ತು ಎಂಡಿಎಂಕೆ ಪಕ್ಷಗಳು ಸೇರಿಕೊಳ್ಳಲು ಮುಂದಾಗಿವೆ. ಸಭೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಜರಾಗುತ್ತಿರುವುದು ವಿಶೇಷ.
ಪ್ರತಿಪಕ್ಷಗಳ ಎರಡನೇ ಸಭೆಯಲ್ಲಿ ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (MDMK), ಕೊಂಗು ದೇಸ ಮಕ್ಕಳ್ ಕಚ್ಚಿ (KDMK), ವಿದುತಲೈ ಚಿರುತೈಗಲ್ ಕಚ್ಚಿ (VCK), ಕ್ರಾಂತಿಕಾರಿ ಸಮಾಜವಾದಿ ಪಕ್ಷ (RSP), ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML), ಕೇರಳ ಕಾಂಗ್ರೆಸ್ (ಜೋಸೆಫ್ ಬಣ) ಮತ್ತು ಕೇರಳ ಕಾಂಗ್ರೆಸ್ (ಮಣಿ ಬಣ) ಪಕ್ಷಗಳು ಹೊಸದಾಗಿ ಸೇರಿಕೊಳ್ಳಲಿದ್ದು, ಇದರಿಂದ ವಿಪಕ್ಷಗಳ ಸಂಖ್ಯೆ 24ಕ್ಕೆ ಏರಿಕೆಯಾಗಲಿದೆ.
ವಿಶೇಷವೆಂದರೆ, ಕೆಡಿಎಂಕೆ ಮತ್ತು ಎಂಡಿಎಂಕೆ ಈ ಹಿಂದೆ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಮಿತ್ರಪಕ್ಷಗಳಾಗಿದ್ದವು. ಈಗ ವಿಪಕ್ಷಗಳ ಪಾಳಯ ಸೇರಿಕೊಳ್ಳಲು ಮುಂದಾಗಿವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಂದಿನ ಏಕತಾ ಸಭೆಯಲ್ಲಿ ಭಾಗವಹಿಸುವಂತೆ ವಿರೋಧ ಪಕ್ಷದ ಪ್ರಮುಖ ನಾಯಕರಿಗೆ ಆಹ್ವಾನವಿತ್ತಿದ್ದಾರೆ. ಜೊತೆಗೆ ಕಾಂಗ್ರೆಸ್ ಅಧಿಕನಾಯಕಿ ಸೋನಿಯಾ ಗಾಂಧಿ ಅವರು ಈ ಸಭೆಯಲ್ಲಿ ಭಾಗವಹಿಸಲಿದ್ದು, ನಿರೀಕ್ಷೆ ಗರಿಗೆದರಿದೆ.
ಖರ್ಗೆ, ನಿತೀಶ್ಕುಮಾರ್ ಪತ್ರ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೂನ್ 23ರಂದು ಪಾಟ್ನಾದಲ್ಲಿ ನಡೆದ ವಿರೋಧ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ನಾಯಕರಿಗೆ ಪತ್ರ ಬರೆದಿದ್ದಾರೆ. ಇದಲ್ಲದೇ, ಖರ್ಗೆ ಅವರು ಸಹಿತ ಪತ್ರ ರವಾನಿಸಿದ್ದು, "ನಮ್ಮ ಪ್ರಜಾಸತ್ತಾತ್ಮಕ ರಾಜಕೀಯಕ್ಕೆ ಧಕ್ಕೆ ತರುವ ಹಲವಾರು ಪ್ರಮುಖ ವಿಷಯಗಳ ಕುರಿತು ಚರ್ಚಿಸಲು ಮತ್ತು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಡಲು ಸರ್ವಾನುಮತದ ಒಪ್ಪಂದಕ್ಕೆ ಬಂದಿದ್ದರಿಂದ ಸಭೆಯು ಉತ್ತಮ ಯಶಸ್ಸನ್ನು ಕಂಡಿದೆ" ಎಂದು ಉಲ್ಲೇಖಿಸಿದ್ದಾರೆ.
"ಚರ್ಚೆಗಳನ್ನು ಮುಂದುವರಿಸುವುದು ಮತ್ತು ಈಗಿನ ಒಗ್ಗಟ್ಟನ್ನು ಕಾಪಾಡಿಕೊಂಡು ಹೋಗುವುದು ಮುಖ್ಯವಾಗಿದೆ. ದೇಶ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ" ಎಂದು ಉಭಯ ನಾಯಕರು ಪತ್ರದಲ್ಲಿ ಹೇಳಿದ್ದಾರೆ.
"ಅದರ ಭಾಗವಾಗಿ ಜುಲೈ 17 ರಂದು ಸಂಜೆ 6 ಗಂಟೆಗೆ ಬೆಂಗಳೂರಿನಲ್ಲಿ ಭೋಜನಕೂಟ ನಡೆಯಲಿದೆ. 18 ರಂದು ಬೆಳಿಗ್ಗೆ 11ಕ್ಕೆ ಎಲ್ಲ ನಾಯಕರ ಸಮ್ಮುಖದಲ್ಲಿ ಸಭೆ ನಡೆಯಲಿದೆ. ನಿಮ್ಮನ್ನು ಭೇಟಿ ಮಾಡಲು ಎದುರುನೋಡುತ್ತಿದ್ದೇನೆ" ಎಂದು ಮಲ್ಲಿಕಾರ್ಜುನ್ ಖರ್ಗೆ, ನಿತೀಶ್ಕುಮಾರ್ ಪತ್ರದಲ್ಲಿ ಕೋರಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಜುಲೈ 17, 18ರಂದು ವಿಪಕ್ಷಗಳ ಸಭೆ: ಕೆ. ಸಿ. ವೇಣುಗೋಪಾಲ್