ನವದೆಹಲಿ: ಕೊರೊನಾ ವೈರಸ್ನಿಂದ ಹೊರಬರಲು ಕೆಲವೊಂದು ರಾಜ್ಯಗಳಲ್ಲಿ ಲಾಕ್ಡೌನ್ ಹೇರಿಕೆ ಮಾಡಲಾಗುತ್ತಿದೆ. ಇದು ಅನೇಕ ಭಾರತೀಯರ ಪಾಲಿಗೆ ವಿಲನ್ ಆಗ್ತಿದ್ದು, ಇದೇ ಕಾರಣದಿಂದಾಗಿ ದೇಶದ 23 ಕೋಟಿ ಜನರು ಬಡತನಕ್ಕೆ ತಲುಪಿದ್ದಾರೆ ಎಂಬ ಸಮೀಕ್ಷೆವೊಂದರಿಂದ ಬಹಿರಂಗಗೊಂಡಿದೆ.
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ವರದಿ ಪ್ರಕಾರ, ಗ್ರಾಮೀಣ ಪ್ರದೇಶದಲ್ಲಿ ಬಡತನದ ಪ್ರಮಾಣ ಶೇ. 15ರಷ್ಟು ಹಾಗೂ ನಗರ ಪ್ರದೇಶದಲ್ಲಿ ಶೇ 8ಕ್ಕೂ ಅಧಿಕ ಜನರಲ್ಲಿ ಕೊರೊನಾ ಲಾಕ್ಡೌನ್ ತೊಂದರೆ ಉಂಟು ಮಾಡಿದೆ ಎಂದು ತಿಳಿಸಿದೆ.
ಲಾಕ್ಡೌನ್ ಘೋಷಣೆ ಮಾಡುತ್ತಿರುವುರುದ ಜನರ ಆರ್ಥಿಕತೆ ಹಾಗೂ ಜೀವನನೋಪಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಸುಮಾರು 23 ಕೋಟಿ ಭಾರತೀಯರನ್ನ ಬಡತನ ರೇಖೆಗೆ ತಳ್ಳಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಸಾಂಕ್ರಾಮಿಕ ಸಮಯದಲ್ಲಿ ರಾಷ್ಟ್ರೀಯ ಕನಿಷ್ಠ ವೇತನ ಮಿತಿಗಿಂತಲೂ ಕೆಳಗಿರುವ ವ್ಯಕ್ತಿಗಳ ಸಂಖ್ಯೆ(ದಿನಕ್ಕೆ 375 ರೂ.) 230 ಮಿಲಿಯನ್ರಷ್ಟಾಗಿದೆ. ಪ್ರಮುಖವಾಗಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶೇ. 20ರಷ್ಟು ಕುಟುಂಬ ತಮ್ಮ ಸಂಪೂರ್ಣ ಆದಾಯ ಕಳೆದುಕೊಂಡಿವೆ. ಇನ್ನು ಶ್ರೀಮಂತ ಕುಟುಂಬಗಳು ಸಹ ತಮ್ಮ ಪೂರ್ವ ಆದಾಯದ ಕಾಲು ಭಾಗಕ್ಕಿಂತಲೂ ಕಡಿಮೆ ನಷ್ಟ ಅನುಭವಿಸಿವೆ.
ಇದಲ್ಲದೇ ಸುಮಾರು 1.5 ಕೋಟಿ ಕಾರ್ಮಿಕರು 2020ರ ಅಂತ್ಯದ ವೇಳೆಗೆ ಕೆಲಸದಿಂದ ಹೊರಗುಳಿದಿದ್ದು, ಲಾಕ್ಡೌನ್ ಘೋಷಣೆ ವೇಳೆ, ಸುಮಾರು 10 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಪ್ರಮುಖವಾಗಿ ಮಹಾರಾಷ್ಟ್ರ, ಕೇರಳ, ತಮಿಳುನಾಡು, ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಹೆಚ್ಚಿನ ಜನರು ಉದ್ಯೋಗ ಕಳೆದುಕೊಂಡಿದ್ದಾರೆ.
ಶೇ. 61ರಷ್ಟು ಪುರುಷರು ಹಾಗೂ ಶೇ. 19ರಷ್ಟು ಮಹಿಳೆಯರು ಮಾತ್ರ ಉದ್ಯೋಗದಲ್ಲಿದ್ದು, ಇದರಲ್ಲಿ ಕಿರಿಯ ಕಾರ್ಮಿಕರು ಹೆಚ್ಚಿನ ಉದ್ಯೋಗ ನಷ್ಟ ಅನುಭವಿಸುತ್ತಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅಜೀಂ ಪ್ರೇಮ್ಜಿ ವಿವಿ ಉಪಕುಲಪತಿ ಅನುರಾಗ್ ಬೆಹರ್, ಕೋವಿಡ್ ಸಾಂಕ್ರಾಮಿಕ ಅತ್ಯಂತ ದುರ್ಬಲ ವರ್ಗದವರನ್ನೂ ಮತ್ತಷ್ಟು ಕೆಳ ಮಟ್ಟಕ್ಕೆ ತಳ್ಳಿದೆ ಎಂದಿದ್ದಾರೆ. ಮಹಿಳೆಯರು ಮತ್ತು ಕಿರಿಯ ಕಾರ್ಮಿಕರ ಮೇಲೆ ಪರಿಣಾಮ ಬೀರಿದೆ. ಕಡಿಮೆ ಆಹಾರ ಸೇವನೆ, ಸಾಲ ಪಡೆದುಕೊಳ್ಳುವುದು ಹಾಗೂ ಆಸ್ತಿ ಮಾರಾಟ ಮಾಡುವ ಮೂಲಕ ಜೀವನ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.