ಹೈದರಾಬಾದ್: ಅಪರೂಪದ ಪ್ರಕರಣವೊಂದರಲ್ಲಿ ನಗರದ ಅವೇರ್ ಗ್ಲೆನೆಗಲ್ಸ್ ಗ್ಲೋಬಲ್ ಖಾಸಗಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರ ದೇಹದಿಂದ ಸುಮಾರು 206 ಕಿಡ್ನಿ ಕಲ್ಲುಗಳನ್ನು ತೆಗೆದುಹಾಕಲಾಗಿದೆ. ಈ ಕಲ್ಲುಗಳಿಂದ 56 ವರ್ಷದ ರೋಗಿಯೊಬ್ಬರು ಕಳೆದ ಆರು ತಿಂಗಳಿನಿಂದ ಸೊಂಟದ ಎಡಭಾಗದಲ್ಲಿ ತೀವ್ರ ಸ್ವರೂಪದ ನೋವಿನಿಂದ ಬಳಲುತ್ತಿದ್ದರು. ಬೇಸಿಗೆಯಲ್ಲಿ ಹೆಚ್ಚುತ್ತಿರುವ ತಾಪಮಾನದಿಂದಾಗಿ ಅವರ ಆರೋಗ್ಯ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿತ್ತು.
ಸೋಂಟದ ಎಡಭಾಗದ ನೋವಿನಿಂದ ಬಳಲುತ್ತಿದ್ದ ವೀರಮಲ್ಲ ರಾಮಲಕ್ಷ್ಮಯ್ಯ ಏಪ್ರಿಲ್ 22 ರಂದು ಖಾಸಗಿ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿದ್ದರು. ಮೂತ್ರಶಾಸ್ತ್ರಜ್ಞ ಡಾ.ಪೂಲಾ ನವೀನ್ ಕುಮಾರ್ ರೋಗಿಯ ಮೂತ್ರಪಿಂಡದಲ್ಲಿ ಕಲ್ಲುಗಳಿರುವುದನ್ನು ಪತ್ತೆ ಹಚ್ಚಿದ್ದಾರೆ. CT KUB ಸ್ಕ್ಯಾನ್ ಮಾಡಿದಾಗ ಕಿಡ್ನಿಯಲ್ಲಿ ಕಲ್ಲು ಇರುವುದು ದೃಢಪಟ್ಟಿದೆ. ಶಸ್ತ್ರಚಿಕಿತ್ಸೆ ನಡೆಸಿ ಕಲ್ಲುಗಳನ್ನು ತೆಗೆಯಬೇಕು ಎಂದು ರೋಗಿಗೆ ತಿಳಿಸಲಾಗಿತ್ತು.
ಇದನ್ನೂ ಓದಿ: ಮಗನ ಪ್ರಾಣ ಉಳಿಸಲು ಮಗನಿಗೆ ಕಿಡ್ನಿ ದಾನ ಮಾಡಿದ ತಾಯಿ; ಕಿಮ್ಸ್ ವೈದ್ಯರಿಂದ ಯಶಸ್ವಿ ಜೋಡಣೆ
ವೈದ್ಯರ ತಂಡ ಒಂದು ಗಂಟೆಯ ಕಾಲ ಕೀಹೋಲ್ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಈ ಸಮಯದಲ್ಲಿ ಸುಮಾರು 206 ಕಿಡ್ನಿ ಕಲ್ಲುಗಳನ್ನು ಹೊರತೆಗೆದರು. ಬಳಿಕ ರೋಗಿ ಚೇತರಿಸಿಕೊಂಡಿದ್ದು, ಎರಡನೇ ದಿನ ರೋಗಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಬೇಸಿಗೆಯಲ್ಲಿ ಹೆಚ್ಚು ತಾಪಮಾನವಿದ್ದು ಜನರು ನಿರ್ಜಲೀಕರಣದಿಂದ ಬಳಲುತ್ತಾರೆ. ಇದು ಮೂತ್ರಪಿಂಡದಲ್ಲಿ ಕಲ್ಲುಗಳ ರಚನೆಗೆ ಕಾರಣವಾಗಬಹುದು. ಹಾಗಾಗಿ, ಜನರು ಹೆಚ್ಚು ನೀರು ಕುಡಿಯಬೇಕು ಮತ್ತು ಸಾಧ್ಯವಾದರೆ ಎಳನೀರು ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.