ನವದೆಹಲಿ:ವಿಶ್ವಾದ್ಯಂತ ಕೋವಿಡ್ ತೀವ್ರಗತಿಯಲ್ಲಿ ಹರಡುತ್ತಿದೆ. ಅಮೆರಿಕ, ಯುರೋಪ್ ರಾಷ್ಟ್ರಗಳು ತತ್ತರಿಸಿವೆ. ಈ ನಡುವೆ ಭಾರತವೂ 3ನೇ ಅಲೆಯಿಂದ ತೀವ್ರವಾಗಿ ಸಂಕಷ್ಟಕ್ಕೀಡಾಗಿದೆ. ಒಮಿಕ್ರಾನ್ ಕಾಟದ ನಡುವೆ ದೇಶದಲ್ಲಿ ಪಂಚ ರಾಜ್ಯಗಳ ಚುನಾವಣೆ ಸಹ ಬಂದಿದೆ.
ಸಾಮಾಜಿಕ ಅಂತರ ಕಾಪಾಡಿಕೊಂಡು, ಪಕ್ಷಗಳ ಅಭ್ಯರ್ಥಿಗಳು ಪ್ರಚಾರ ನಡೆಸಬೇಕಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಎಲ್ಲ ರಾಜಕೀಯ ಪಕ್ಷಗಳು ವರ್ಚುಯಲ್ ರ‍್ಯಾಲಿಗಳು ಹಾಗೂ ವಿಡಿಯೋ ಕಾನ್ಫರೆನ್ಸ್ಗಳಿಗೆ ಮೊರೆ ಹೋಗುತ್ತಿವೆ.
ಸಾಮಾಜಿಕ ಜಾಲತಾಣ ಹಾಗೂ ಡಿಜಿಟಲ್ ತಂತ್ರಜ್ಞಾನ ಬಳಕೆಯಲ್ಲಿ ಮುಂದಿರುವ ಬಿಜೆಪಿ ಈ ಬಾರಿ ಐದು ರಾಜ್ಯಗಳ ಚುನಾವಣೆ ಪ್ರಚಾರಕ್ಕೆ ಹ್ರೈಬಿಡ್ ಮೋಡ್ ಬಳಕೆಗೆ ನಿರ್ಧರಿಸಿದೆ. ವಿವಿಧ ಸಾಮಾಜಿಕ ಜಾಲತಾಣದ ವೇದಿಕೆಗಳ ಮೂಲಕ ಹೆಚ್ಚೆಚ್ಚು ಜನರನ್ನು ತಲುಪಲು ಮುಂದಾಗಿದೆ.
ಪಕ್ಷದ ಮೂಲಗಳ ಪ್ರಕಾರ, ಕೋವಿಡ್-19 ಅನ್ನು ಗಮನದಲ್ಲಿಟ್ಟುಕೊಂಡು ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಬಿಜೆಪಿ ಹೊಸ ಪ್ರಚಾರ ತಂತ್ರವನ್ನು ಸಿದ್ಧಪಡಿಸಿದೆ. ಚುನಾವಣಾ ಆಯೋಗದ ಮಾರ್ಗಸೂಚಿಗಳ ಅನ್ವಯವೇ ಸಣ್ಣ ಸಣ್ಣ ರ‍್ಯಾಲಿ ಆಯೋಜನೆ, ಹಾಗೂ ಅದೇ ರ‍್ಯಾಲಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ನೇರ ಪ್ರಸಾರದ ವ್ಯವಸ್ಥೆ ಮೂಲಕ ಮತದಾರರಿಗೆ ತಲುವಂತೆ ಮಾಡುವ ಪ್ಲಾನ್ ಹಾಕಿದೆ.
ಈ ಮೂಲಕ ಆಯಾ ವಿಧಾನಸಭಾ ಕ್ಷೇತ್ರದ, ಪ್ರದೇಶದ ಸುಮಾರು ಒಂದರಿಂದ ಎರಡು ಲಕ್ಷ ಜನರನ್ನು ತಲುಪುವಂತೆ ಮಾಡುವ ಗುರಿ ಹೊಂದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಈ ಅಭಿಯಾನದ ಕಾರ್ಯತಂತ್ರದ ಕುರಿತು ಹಲವಾರು ನಾಯಕರೊಂದಿಗೆ ಈಗಾಗಲೇ ಚರ್ಚೆ ನಡೆಸಿದ್ದು, ಎಲ್ಲ ರ‍್ಯಾಲಿಗಳನ್ನು ಹೈಬ್ರಿಡ್ ಮೋಡ್‌ನಲ್ಲಿ ನಡೆಸಲಾಗುವುದು ಎಂದು ಘೋಷಿಸಿದ್ದಾರೆ.
ಪಕ್ಷ ಆಯೋಜಿಸುವ ಸಣ್ಣ ಸಣ್ಣ ರ‍್ಯಾಲಿಗಳಲ್ಲಿ ಪಕ್ಷದ ಹಿರಿಯ ನಾಯಕರು ದೈಹಿಕವಾಗಿ ಭಾಗವಹಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಮಾತನಾಡುತ್ತಾರೆ. ಈ ಭಾಷಣಗಳನ್ನು ಸಾಮಾಜಿಕ ಜಾಲತಾಣ, ಮಾಧ್ಯಮಗಳ ಮೂಲಕ ನೇರ ಪ್ರಸಾರ ಮಾಡುವ ಮೂಲಕ ಮತದಾರರು ಇದ್ದಲ್ಲೇ ತಲುಪಿಸುವ ವ್ಯವಸ್ಥೆ ಮಾಡಲು ಪಕ್ಷ ನಿರ್ಧರಿಸಿದೆ.
ಇದನ್ನೂ ಓದಿ:ಪಂಜಾಬ್ ಆಯ್ತು.. ನಾಳೆ ಗೋವಾ ಸಿಎಂ ಅಭ್ಯರ್ಥಿ ಘೋಷಣೆ: ಕೇಜ್ರಿವಾಲ್